ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾಸನ: ಸೇವೆ ಮಾಡಲು ಶ್ರೀಮಂತಿಕೆ ಬೇಕಾಗಿಲ್ಲ, ನೆರವಾಗುವ ಮನಸ್ಸಿದ್ರೆ ದೇವರೇ ದಾರಿ ತೋರಿಸುತ್ತಾನೆ – ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ

ಹಾಸನ, ಜೂನ್ 11: ಗ್ರಾಮೀಣ ಹಾಗೂ ದುರ್ಗಮ ಪ್ರದೇಶಗಳ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆಯನ್ನು ತಲುಪಿಸುವ ಮಹತ್ವಾಕಾಂಕ್ಷೆಯ ಯೋಜನೆಯಾದ ಶ್ರೀ ಪುಷ್ಪಗಿರಿ ಸಂಚಾರಿ ಆಸ್ಪತ್ರೆ (ವೈದ್ಯಕೀಯ ವಾಹನ) ಯನ್ನು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಗಳು ಗುರುವಾರ ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಲೋಕಾರ್ಪಣೆಗೊಳಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದ ಸ್ವಾಮೀಜಿಗಳು, ಸಮಾಜ ಸೇವೆ ಮಾಡಲು ಶ್ರೀಮಂತಿಕೆ ಅಥವಾ ಅಪಾರ ಸಂಪತ್ತು ಅಗತ್ಯವಿಲ್ಲ. ಇತರರಿಗೆ ನೆರವಾಗುವ ಮನಸ್ಸು, ಸದುದ್ದೇಶ ಮತ್ತು ಮಾನವೀಯ ಕಾಳಜಿ ಇದ್ದರೆ ಸಾಕು. ಅಂತಹ ಒಳ್ಳೆಯ ಕಾರ್ಯಗಳಿಗೆ ಭಗವಂತನೇ ಸಹಾಯ ಮಾಡುತ್ತಾನೆ ಹಾಗೂ ದಾರಿಗಳನ್ನು ಸೃಷ್ಟಿಸುತ್ತಾನೆ ಎಂದು ಹೇಳಿದರು.

ಆರೋಗ್ಯ ಸೇವೆ ಪ್ರತಿಯೊಬ್ಬರ ಮೂಲಭೂತ ಹಕ್ಕಾಗಿದ್ದು, ನಗರ ಪ್ರದೇಶಗಳಿಗೆ ಸೀಮಿತವಾಗದೆ ಗ್ರಾಮೀಣ ಹಾಗೂ ಹಿಂದುಳಿದ ಪ್ರದೇಶಗಳ ಜನರಿಗೂ ತಲುಪಬೇಕು. ಈ ನಿಟ್ಟಿನಲ್ಲಿ ಸಂಚಾರಿ ಆಸ್ಪತ್ರೆಗಳು ಮಹತ್ವದ ಪಾತ್ರ ವಹಿಸುತ್ತವೆ. ವೈದ್ಯಕೀಯ ಸೇವೆ ದೊರೆಯದ ಪ್ರದೇಶಗಳಿಗೆ ಆರೋಗ್ಯ ಸೇವೆಯನ್ನು ಕೊಂಡೊಯ್ಯುವ ಕಾರ್ಯ ನಿಜವಾದ ಮಾನವ ಸೇವೆಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಶೃಂಗೇರಿ ಶಾಖಾ ಮಠದ ಶ್ರೀ ಗುಣನಾಥ ಸ್ವಾಮೀಜಿಗಳು, ಪುಷ್ಪಗಿರಿ ಮಠದ ಶ್ರೀ ಸೋಮಶೇಖರ ಸ್ವಾಮೀಜಿಗಳು, ಬೇಲೂರು ಶಾಸಕ ಹೆಚ್.ಕೆ. ಸುರೇಶ್ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಚಾರಿ ಆಸ್ಪತ್ರೆಯ ಕಾರ್ಯಕ್ಕೆ ಶುಭ ಹಾರೈಸಿದರು.

ಈ ಸಂಚಾರಿ ಆಸ್ಪತ್ರೆಯ ಮೂಲಕ ಗ್ರಾಮೀಣ ಹಾಗೂ ದುರ್ಗಮ ಪ್ರದೇಶಗಳ ಜನರಿಗೆ ಉಚಿತ ಆರೋಗ್ಯ ತಪಾಸಣೆ, ಪ್ರಾಥಮಿಕ ಚಿಕಿತ್ಸೆ, ಆರೋಗ್ಯ ಜಾಗೃತಿ, ವೈದ್ಯಕೀಯ ಸಲಹೆ ಹಾಗೂ ಅಗತ್ಯ ಚಿಕಿತ್ಸಾ ಮಾರ್ಗದರ್ಶನ ಒದಗಿಸಲಾಗುವುದು. ಇದರಿಂದ ಆರೋಗ್ಯ ಸೇವೆಯಿಂದ ವಂಚಿತರಾಗಿರುವ ಸಾವಿರಾರು ಜನರಿಗೆ ಅನುಕೂಲವಾಗಲಿದ್ದು, ಸಮಾಜದ ಬಡ ಹಾಗೂ ಹಿಂದುಳಿದ ವರ್ಗದ ಜನರ ಆರೋಗ್ಯ ಸುಧಾರಣೆಗೆ ನೆರವಾಗಲಿದೆ ಎಂದು ಗಣ್ಯರು ಅಭಿಪ್ರಾಯಪಟ್ಟರು.

ಆರೋಗ್ಯ ಸೇವೆಯನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಈ ವಿನೂತನ ಯೋಜನೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದ್ದು, ಸಮಾಜಮುಖಿ ಕಾರ್ಯಗಳಲ್ಲಿ ಪುಷ್ಪಗಿರಿ ಮಠ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ ಎಂದು ಪ್ರಶಂಸಿಸಲಾಯಿತು.

ಕಾರ್ಯಕ್ರಮದಲ್ಲಿ ವಿವಿಧ ಮಠಾಧೀಶರು, ಜನಪ್ರತಿನಿಧಿಗಳು, ವೈದ್ಯರು, ಸಮಾಜ ಸೇವಕರು, ಭಕ್ತಾದಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

Edited By : Vinayak Patil
Kshetra Samachara

Kshetra Samachara

12/06/2026 05:29 pm

Cinque Terre

1.2 K

Cinque Terre

0

ಸಂಬಂಧಿತ ಸುದ್ದಿ