ರಾಮನಗರ: ಬಿಡದಿ ಟೌನ್‌ಶಿಪ್ ಯೋಜನೆ ಕುರಿತ ಜಟಾಪಟಿ ತೀವ್ರಗೊಂಡಿದ್ದು, ಅಂತಿಮ ಅಧಿಸೂಚನೆ ಪ್ರಕಟಗೊಂಡ ಬೆನ್ನಲ್ಲೇ ರೈತರ ಆಕ್ರೋಶ ಸ್ಫೋಟಗೊಂಡಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ವಿರುದ್ಧ ಬೃಹತ್ ಹೋರಾಟಕ್ಕೆ ರೈತರು ಸಜ್ಜಾಗಿದ್ದು, ಇದು ರಾಜಕೀಯ ಸಂಘರ್ಷಕ್ಕೂ ಕಾರಣವಾಗಿದೆ. ಜೂನ್ 22ರಂದು ಬೃಹತ್ ಪ್ರತಿಭಟನೆಗೆ ಕರೆ ನೀಡಲಾಗಿದ್ದು, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ರೈತರ ಹೋರಾಟಕ್ಕೆ ಬೆಂಬಲ ಘೋಷಿಸಿವೆ.
ರೈತರ ತೀವ್ರ ವಿರೋಧದ ನಡುವೆಯೂ ಸರ್ಕಾರ ಬಿಡದಿ ಟೌನ್‌ಶಿಪ್‌ಗೆ ಅಂತಿಮ ಅಧಿಸೂಚನೆ ಹೊರಡಿಸಿದೆ. ಇದರ ಬೆನ್ನಲ್ಲೇ ರೈತರ ಆಕ್ರೋಶ ಮಿತಿಮೀರಿದ್ದು, ಬೃಹತ್ ಹೋರಾಟಕ್ಕೆ ಕರ್ನಾಟಕ ರಾಜ್ಯ ರೈತಸಂಘ ಸಜ್ಜಾಗಿದೆ. ರಾಮನಗರದ ಎಪಿಎಂಸಿ ಆವರಣದ ರೈತಭವನದಲ್ಲಿ ಪೂರ್ವಭಾವಿ ಸಭೆ ನಡೆಸಿದ ರೈತಸಂಘ, 'ಭೈರಮಂಗಲ ಚಲೋ' ಹೋರಾಟಕ್ಕೆ ಕರೆ ನೀಡಿದೆ.
ಜೂನ್ 22ರ ಸೋಮವಾರ ಬೃಹತ್ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದ್ದು, ಬಿಡದಿಯ ಬಿಜಿಎಸ್ ವೃತ್ತದಿಂದ ಭೈರಮಂಗಲ ಗ್ರಾಮದವರೆಗೂ ಬೈಕ್ ರ‍್ಯಾಲಿ ಹಾಗೂ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ರೈತರು ಬಿಡದಿ ಟೌನ್‌ಶಿಪ್ ಯೋಜನೆ ವಿರುದ್ಧ ಕಾನೂನು ಹೋರಾಟಕ್ಕೂ ಸಿದ್ಧತೆ ನಡೆಸಿದ್ದಾರೆ. ಯಾವುದೇ ಅಧಿಕಾರಿಗಳು ತಮ್ಮ ಗ್ರಾಮ ಪ್ರವೇಶ ಮಾಡದಂತೆ ತಡೆ ನೀಡುವ ಬಗ್ಗೆಯೂ ಚಿಂತನೆ ನಡೆಸಿದ್ದಾರೆ. ಜೂನ್ 22ರ ಈ ಹೋರಾಟಕ್ಕೆ ಸುಮಾರು 7 ಜಿಲ್ಲೆಗಳಿಂದ 4 ಸಾವಿರಕ್ಕೂ ಹೆಚ್ಚು ರೈತರು ಆಗಮಿಸುವ ನಿರೀಕ್ಷೆ ಇದೆ. ರೈತರ ಈ ಹೋರಾಟಕ್ಕೆ ಬಿಜೆಪಿ, ಜೆಡಿಎಸ್ ಪಕ್ಷಗಳ ಜೊತೆಗೆ ವಿವಿಧ ಕಾರ್ಮಿಕ ಹಾಗೂ ಕನ್ನಡಪರ ಸಂಘಟನೆಗಳು ಕೂಡಾ ಬೆಂಬಲ ಘೋಷಿಸಿವೆ.
ಒಂದೆಡೆ ರೈತರು ಹೋರಾಟಕ್ಕೆ ಸಿದ್ಧತೆ ನಡೆಸಿದ್ದರೆ, ಮತ್ತೊಂದೆಡೆ ಟೌನ್‌ಶಿಪ್ ಅಂತಿಮ ಅಧಿಸೂಚನೆ ಕುರಿತು ರೈತರಿಗೆ ನೋಟಿಸ್ ನೀಡುವ ಕಾರ್ಯ ಭರದಿಂದ ಸಾಗಿದೆ. ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (GBDA) ವತಿಯಿಂದ ನೋಟಿಸ್ ವಿತರಣೆ ಮಾಡಲಾಗುತ್ತಿದ್ದು, ಬಿಡದಿ ಹೋಬಳಿಯ ಕೆಂಪಯ್ಯನಪಾಳ್ಯ ಗ್ರಾಮದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಈ ಕಾರ್ಯದಲ್ಲಿ ನಿರತರಾಗಿದ್ದಾರೆ.
ಒಟ್ಟು 9 ಕಂದಾಯ ಗ್ರಾಮಗಳ ಪೈಕಿ 3 ಗ್ರಾಮಗಳ 518 ಎಕರೆ ಭೂಮಿಗೆ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. ಕೆಂಪಯ್ಯನಪಾಳ್ಯ ಗ್ರಾಮದ 598 ಖಾತೆದಾರರ ಭೂಸ್ವಾಧೀನ ಪ್ರಕ್ರಿಯೆ ಆರಂಭಗೊಂಡಿದೆ. ಈ ಪೈಕಿ 180 ಮಂದಿ ಖಾತೆದಾರರು GBDA ನೋಟಿಸ್ ಸ್ವೀಕರಿಸಿ ಯೋಜನೆಗೆ ಬೆಂಬಲ ವ್ಯಕ್ತಪಡಿಸಿದ್ದರೆ, ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿರುವ ಅನೇಕ ರೈತರು ನೋಟಿಸ್ ತಿರಸ್ಕರಿಸಿದ್ದಾರೆ.
ಈ ಮಧ್ಯೆ, ಜೆಡಿಎಸ್ ಯುವನಾಯಕ ನಿಖಿಲ್ ಕುಮಾರಸ್ವಾಮಿ ಅವರು ಬಿಡದಿ ಹೋಬಳಿಯ ವಡೇರಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ರೈತರಿಗೆ ಬೆಂಬಲ ಸೂಚಿಸಲಿದ್ದು, ಹೋರಾಟದ ಕುರಿತು ಅವರೊಂದಿಗೆ ಚರ್ಚೆ ನಡೆಸಲಿದ್ದಾರೆ.
ಕೇಂದ್ರ ಸಚಿವ ಹೆಚ್. ಡಿ. ಕುಮಾರಸ್ವಾಮಿ ಈ ಯೋಜನೆ ಕುರಿತು ಮಾತನಾಡಿದ್ದು, "ನಾನು ಟೌನ್‌ಶಿಪ್ ಮಾಡಲು ಹೊರಟಿದ್ದು ನಿಜ, ಆದರೆ ರೈತರ ವಿರೋಧದಿಂದ ನಿಲ್ಲಿಸಿದ್ದೆ. ಈಗ ಏಕಾಏಕಿ ಅಧಿಸೂಚನೆ ಹೊರಡಿಸಿದ್ದಾರೆ. ಮೊದಲು 2 ಸಾವಿರ ಎಕರೆ ಸರ್ಕಾರಿ ಭೂಮಿ ಎಂದು ಹೇಳಿದ್ದರು. ಈಗ 700 ಎಕರೆ ಸರ್ಕಾರಿ ಭೂಮಿ ಎಂದು ಲೆಕ್ಕ ತೋರಿಸುತ್ತಿದ್ದಾರೆ. ಆ ಉಳಿದ ಸರ್ಕಾರಿ ಭೂಮಿ ಎಲ್ಲೋಯ್ತು? ಯಾರ್ಯಾರ ಹೆಸರಿಗೆ ಏನೇನು ಮಾಡಿಕೊಂಡಿದ್ದೀರಿ?" ಎಂದು ಪ್ರಶ್ನಿಸುವ ಮೂಲಕ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಇದಕ್ಕೆ ತಿರುಗೇಟು ನೀಡಿರುವ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್, "ಬಿಡದಿ ಟೌನ್‌ಶಿಪ್ ವಿಚಾರದಲ್ಲಿ ಜೆಡಿಎಸ್ ಹೋರಾಟ ಮಾಡಲಿ. ಕುಮಾರಸ್ವಾಮಿ ಅವರೇ ಹಾಕಿಕೊಟ್ಟ ಮಾರ್ಗದಲ್ಲೇ ನಾವು ಟೌನ್‌ಶಿಪ್ ಮಾಡುತ್ತಿದ್ದೇವೆ. ಈ ಯೋಜನೆಗೆ ಪ್ರಧಾನಿಯವರೇ ಶ್ಲಾಘನೆ ವ್ಯಕ್ತಪಡಿಸಿದ್ದಾರೆ" ಎಂದು ಹೇಳಿದ್ದಾರೆ.
ಒಟ್ಟಾರೆ, ಬಿಡದಿ ಟೌನ್‌ಶಿಪ್ ಯೋಜನೆ ಕೇವಲ ರೈತ ಹೋರಾಟಕ್ಕೆ ಮಾತ್ರವಲ್ಲದೆ, ರಾಜಕೀಯ ಸಂಘರ್ಷಕ್ಕೂ ಕಾರಣವಾಗಿದ್ದು, ಡಿ.ಕೆ. ಶಿವಕುಮಾರ್ ಮತ್ತು ಹೆಚ್.ಡಿ. ಕುಮಾರಸ್ವಾಮಿ ನಡುವಿನ ವಾಕ್ಸಮರವನ್ನು ಮತ್ತಷ್ಟು ತೀವ್ರಗೊಳಿಸಿದೆ.
PublicNext
14/06/2026 04:25 pm