ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಿಡದಿ ಟೌನ್‌ಶಿಪ್ ವಿಚಾರದಲ್ಲಿ ಚಾಮುಂಡೇಶ್ವರಿ ಮುಂದೆ ಬಂದು ಆಣೆ ಮಾಡಿ! ಎಚ್‌ಡಿಕೆಗೆ ಶಾಸಕ ಬಾಲಕೃಷ್ಣ ಸವಾಲು.!

ಬೆಂಗಳೂರು: ಬಿಡದಿ ಟೌನ್‌ಶಿಪ್ ಯೋಜನೆಯ ಹೆಸರಿನಲ್ಲಿ ರಾಜ್ಯ ರಾಜಕಾರಣದಲ್ಲಿ ತೀವ್ರ ಜಟಾಪಟಿ ಶುರುವಾಗಿದೆ. ಸರ್ಕಾರದ ಅಧಿಸೂಚನೆಯನ್ನು ವಿರೋಧಿಸಿ ರೈತರು ನಡೆಸುತ್ತಿರುವ ಹೋರಾಟಕ್ಕೆ ಜೆಡಿಎಸ್ ಬೆಂಬಲ ಸೂಚಿಸಿದೆ. ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಬಿಡದಿಗೆ ಭೇಟಿ ನೀಡಿ ರೈತರ ಪ್ರತಿಭಟನೆಗೆ ಸಾಥ್ ನೀಡಿದರು. ಈ ಬೆಳವಣಿಗೆಗಳ ಬೆನ್ನಲ್ಲೇ, ಜೆಡಿಎಸ್ ಹೋರಾಟಕ್ಕೆ ತಿರುಗೇಟು ನೀಡಲು ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಮುಂದಾಗಿದ್ದರೆ, ಇದೇ ವಿಚಾರವಾಗಿ ಕೇಂದ್ರ ಸಚಿವ ಹೆಚ್. ಡಿ. ಕುಮಾರಸ್ವಾಮಿಗೆ ಮಾಗಡಿ ಶಾಸಕ ಬಾಲಕೃಷ್ಣ ಗಂಭೀರ ಸವಾಲು ಹಾಕಿದ್ದಾರೆ.

ಬಿಡದಿ ಟೌನ್‌ಶಿಪ್ ವಿರೋಧಿಸಿ ನಡೆಯುತ್ತಿರುವ ಪಾದಯಾತ್ರೆ ಕುರಿತು ಪ್ರತಿಕ್ರಿಯಿಸಿದ ಮಾಗಡಿ ಶಾಸಕ ಹೆಚ್.ಸಿ. ಬಾಲಕೃಷ್ಣ, ಜೆಡಿಎಸ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. "ಬಿಡದಿ ಟೌನ್‌ಶಿಪ್ ಯೋಜನೆಯನ್ನು ರೈತರ ಪರವಾಗಿ ಕೈಬಿಡಲು ಒಪ್ಪಿದ್ದೆ ಎಂದು ಹೆಚ್. ಡಿ. ಕುಮಾರಸ್ವಾಮಿ ಚಾಮುಂಡೇಶ್ವರಿ ದೇವಿಯ ಮೇಲೆ ಪ್ರಮಾಣ ಮಾಡಲಿ" ಎಂದು ಸವಾಲು ಹಾಕಿದರು.

2018ರಲ್ಲಿ ಈ ಯೋಜನೆ ಕೈಬಿಡಲು ಒಪ್ಪಿದ್ದ ಬಗ್ಗೆ ಕುಮಾರಸ್ವಾಮಿ ಪ್ರಮಾಣ ಮಾಡಬೇಕೆಂದು ಒತ್ತಾಯಿಸಿದ ಬಾಲಕೃಷ್ಣ, ಹೆಚ್.ಡಿ. ಕುಮಾರಸ್ವಾಮಿ ಅವರು ಕೇಂದ್ರ ಸಚಿವರಾದ ನಂತರವಷ್ಟೇ ಬಿಡದಿ ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಆರೋಪಿಸಿದರು. ಸಮಸ್ಯೆಯನ್ನು ಹುಟ್ಟುಹಾಕಿದವರೇ ಈಗ ಹೋರಾಟ ಮಾಡುತ್ತಿದ್ದಾರೆ ಎಂದು ಅವರು ತೀಕ್ಷ್ಣ ವಾಗ್ದಾಳಿ ನಡೆಸಿದರು.

ಬಿಡದಿ ಟೌನ್‌ಶಿಪ್ ಯೋಜನೆಗೆ ಜೆಡಿಎಸ್‌ನ ವಿರೋಧದ ಕುರಿತು ಮಾತನಾಡಿದ ಶಾಸಕ ಬಾಲಕೃಷ್ಣ, ಈ ಯೋಜನೆಗೆ ಅಧಿಸೂಚನೆ ಹೊರಡಿಸಿದ್ದು ಯಾರು ಎಂದು ಪದೇ ಪದೇ ಹೇಳುವ ಅಗತ್ಯವಿಲ್ಲ ಎಂದರು. "ಕುಮಾರಸ್ವಾಮಿಗೆ ರೈತರ ಬಗ್ಗೆ ನಿಜವಾದ ಕಾಳಜಿ ಇದ್ದಿದ್ದರೆ, 2018ರಲ್ಲೇ ರೆಡ್ ಜೋನ್ ತೆಗೆದುಹಾಕಬಹುದಿತ್ತು. ಅಂದು ಇದೇ ರೈತರು ಹೋರಾಟ ಮಾಡಿ ಯೋಜನೆ ಕೈಬಿಡುವಂತೆ ಮನವಿ ಮಾಡಿದ್ದರು. ಆದರೆ ಆಗ ಕುಮಾರಸ್ವಾಮಿ ಅವರು 'ಇದು ನನ್ನ ಕನಸಿನ ಕೂಸು' ಎಂದು ಹೇಳಿದ್ದರು" ಎಂದು ನೆನಪಿಸಿದರು. ಸಮಯಕ್ಕೆ ತಕ್ಕಂತೆ ಮಾತನಾಡುವ ಅಭ್ಯಾಸವನ್ನು ಕುಮಾರಸ್ವಾಮಿ ಬಿಡಬೇಕು ಎಂದು ಟೀಕಿಸಿದ ಅವರು, ಪಾದಯಾತ್ರೆ, ಹೋರಾಟ ಮಾಡಬಹುದು, ಆದರೆ ಈ ಯೋಜನೆ ಯಾರದ್ದು? ಡಿಎಲ್‌ಎಫ್‌ನಿಂದ ಹಣ ಪಡೆದುಕೊಂಡು ಹೋಗಿದ್ದು ಯಾರು? ಎಂದು ನೇರವಾಗಿ ಪ್ರಶ್ನಿಸಿದರು.

ಇದೇ ಸಂದರ್ಭದಲ್ಲಿ, ವಿರೋಧ ಪಕ್ಷದ ನಾಯಕ ಆರ್. ಅಶೋಕ್ ವಿರುದ್ಧವೂ ಶಾಸಕ ಹೆಚ್. ಸಿ. ಬಾಲಕೃಷ್ಣ ವಾಗ್ದಾಳಿ ನಡೆಸಿದರು. "ನಾವು ಏನಾದರೂ ಅಭಿವೃದ್ಧಿ ಮಾಡಲು ಹೊರಟರೆ ಅವರು ತರಲೆ ಮಾಡುತ್ತಾರೆ. ಕಸದ ಬಗ್ಗೆ ಸಮರ್ಪಕ ತೀರ್ಮಾನ ಕೈಗೊಂಡಿದ್ದರೆ ಅವರು ಸೋಲುತ್ತಲೇ ಇರಲಿಲ್ಲ. ಬೆಂಗಳೂರು ಹೊರಗೆ ಅಭಿವೃದ್ಧಿ ಮಾಡಿ ಎನ್ನುತ್ತೀರಾ, ಈಗ ವಿರೋಧ ಮಾಡುತ್ತೀರಾ? ಇದು ಇಂದಿನ ಯೋಜನೆಯಲ್ಲ, ಬಹಳ ದಿನಗಳಿಂದ ಇರುವ ಯೋಜನೆ. ಈಗ ಬಿಡದಿ ಬಗ್ಗೆ ವಿರೋಧವೇಕೆ? ಅಶೋಕ್ ಏನು ಟಾಟಾ ಬಿರ್ಲಾ ಮಗನಾ? ನಾನು ಎಲ್ಲಿಯೂ ಹಣ ಪಡೆದಿಲ್ಲ ಎಂದು ಅಶೋಕ್ ಪ್ರಮಾಣ ಮಾಡಲಿ" ಎಂದು ಬಾಲಕೃಷ್ಣ ಸವಾಲು ಹಾಕಿದರು.

Edited By :
PublicNext

PublicNext

14/06/2026 06:02 pm

Cinque Terre

14.94 K

Cinque Terre

0