ಕುಂದಾಪುರ: ಕುಂದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಮನೆ ಕಳವು ಹಾಗೂ ಬೈಕ್ ಕಳ್ಳತನ ಪ್ರಕರಣಗಳನ್ನು ಪೊಲೀಸರು ಭೇದಿಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕುಂದಾಪುರ ತಾಲೂಕಿನ ಸಂಗಮ್ ಜಂಕ್ಷನ್ ಸಮೀಪದ ಜೆಎಂಜೆ ವಿಲ್ಲಾ ನಿವಾಸದಲ್ಲಿ ಮನೆಯ ಮುಂಭಾಗದ ಬಾಗಿಲಿನ ಚಿಲಕ ಮುರಿದು ಒಳನುಗ್ಗಿದ್ದ ಕಳ್ಳರು, ಕಪಾಟಿನ ಬೀಗ ತೆರೆಯುವ ಮೂಲಕ ಅದರಲ್ಲಿದ್ದ ₹10,000 ನಗದು ಕಳವು ಮಾಡಿಕೊಂಡು ಹೋಗಿದ್ದರು. ಈ ಕುರಿತು ಕುಂದಾಪುರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 22/2026ರಡಿ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 331(3), 331(4) ಹಾಗೂ 305ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಇದೇ ವೇಳೆ, ಕಸಬ ಗ್ರಾಮದ ವಿನಯ್ ಆಸ್ಪತ್ರೆ ಸಮೀಪದ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಲಾಗಿದ್ದ ಹೀರೋ ಹೋಂಡಾ ಮೋಟಾರು ಸೈಕಲ್‌ನ್ನು ಕಳ್ಳರು ಕಳವು ಮಾಡಿಕೊಂಡು ಹೋಗಿದ್ದರು. ಸುಮಾರು ₹20,000 ಮೌಲ್ಯದ ಬೈಕ್ ಕಳುವಾಗಿರುವ ಕುರಿತು ಅಪರಾಧ ಸಂಖ್ಯೆ 23/2026ರಡಿ BNS ಕಲಂ 303(2) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣಗಳ ತನಿಖೆ ಕೈಗೊಂಡ ಕುಂದಾಪುರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಎಚ್.ಡಿ. ಕುಲಕರ್ಣಿ ಹಾಗೂ ಪೊಲೀಸರು ಗುಜರಾತ್ ರಾಜ್ಯದ ಅಮ್ರೇಲಿ ಜಿಲ್ಲೆಯ ಸಾವರ್ ಕುಂಡ್ಲ ಪ್ರದೇಶಕ್ಕೆ ತೆರಳಿ ಶೋಧ ನಡೆಸಿದರು. ಆರೋಪಿ ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರದಲ್ಲಿ ಇರುವ ಮಾಹಿತಿ ಪಡೆದು ಅಲ್ಲಿಗೆ ತೆರಳಿ ವಶಕ್ಕೆ ಪಡೆದರು.
ವಿಚಾರಣೆ ವೇಳೆ ಆರೋಪಿಯು ಕುಂದಾಪುರದಲ್ಲಿ ಮನೆ ಕಳವು ಹಾಗೂ ಬೈಕ್ ಕಳ್ಳತನ ನಡೆಸಿರುವುದನ್ನು ಒಪ್ಪಿಕೊಂಡಿದ್ದಾನೆ. ಆರೋಪಿಯಿಂದ ಕಳುವಾಗಿದ್ದ ಮೋಟಾರು ಸೈಕಲ್‌ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.
Kshetra Samachara
14/06/2026 06:19 pm