ಎನ್.ಆರ್.ಪುರ: ಚಿಕ್ಕಮಗಳೂರು ಜಿಲ್ಲೆಯ ಎನ್‌ಆರ್ ಪುರ ತಾಲೂಕಿನ ಮರಾಠಿ ಕ್ಯಾಂಪ್ ಹಾಗೂ ಸುತ್ತಲಿನ ಗ್ರಾಮಗಳಲ್ಲಿ ಹಗಲಿನ ವೇಳೆ ಹುಲಿ ಹಾಗೂ ಸಂಜೆ ಸಮಯದಲ್ಲಿ ಚಿರತೆಯ ನಿರಂತರ ದರ್ಶನವಾಗುತ್ತಿರುವ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಭೀತಿಯ ವಾತಾವರಣ ನಿರ್ಮಾಣವಾಗಿದೆ. ವನ್ಯಮೃಗಗಳ ಭಯದಿಂದಾಗಿ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸದೆ ಮನೆಯಲ್ಲೇ ಉಳಿಸಿಕೊಂಡಿದ್ದರಿಂದ ಮರಾಠಿ ಕ್ಯಾಂಪ್ ಮತ್ತು ಚೋಡಿಕಟ್ಟೆಯ 28 ಶಾಲಾ ಮಕ್ಕಳು ಹಾಗೂ 13 ಅಂಗನವಾಡಿ ಮಕ್ಕಳು ಶಾಲೆಗೆ ಮೂರು ದಿನ ಗೈರಾಗಿದ್ದರು.
ಈ ಹಿನ್ನೆಲೆಯಲ್ಲಿ ಭದ್ರಾ ಅಚ್ಚುಕಟ್ಟು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಅಂಶುಮಂತ್ ಸ್ಥಳಕ್ಕೆ ಭೇಟಿ ನೀಡಿ ಗ್ರಾಮಸ್ಥರು ಮತ್ತು ಪೋಷಕರೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ಮಕ್ಕಳನ್ನು ಮನೆಯಲ್ಲೇ ಇರಿಸಿಕೊಳ್ಳುವುದು ಸರಿಯಲ್ಲ ಪೋಷಕರೇ ಸರದಿಯಂತೆ ಜವಾಬ್ದಾರಿ ವಹಿಸಿಕೊಂಡು ಮಕ್ಕಳನ್ನು ಸುರಕ್ಷಿತವಾಗಿ ಶಾಲೆಗೆ ಕರೆದೊಯ್ಯಲು ಸಲಹೆ ನೀಡಿದ್ದಾರೆ. ಇದೇ ವೇಳೆ ಮರಾಠಿ ಕ್ಯಾಂಪ್‌ನಿಂದ ಬೈರಾಪುರಕ್ಕೆ ಕಾಡಂಚಿನ ಸರ್ಕಾರಿ ಜಾಗದ ಮೂಲಕ ರಸ್ತೆ ನಿರ್ಮಿಸಲು ಸಂಬಂಧಪಟ್ಟ ಎಂಜಿನಿಯರ್‌ಗೆ ತಕ್ಷಣವೇ ಕ್ರಿಯಾ ಯೋಜನೆ ಸಿದ್ಧಪಡಿಸುವಂತೆ ಸೂಚನೆ ನೀಡಲಾಗಿದೆ. ಮಕ್ಕಳು 1 ಕಿಲೋಮೀಟರ್ ನಡೆದುಕೊಂಡು ಹೋಗುವ ಕಷ್ಟವನ್ನು ತಪ್ಪಿಸಲು ಸಮುದಾಯ ಭವನವನ್ನು ದುರಸ್ತಿಗೊಳಿಸಿ, ಅಲ್ಲಿಯೇ ತಾತ್ಕಾಲಿಕವಾಗಿ ಅಂಗನವಾಡಿ ಆರಂಭಿಸಲು ಅಧಿಕಾರಿಗಳೊಂದಿಗೆ ಚರ್ಚಿಸಿ ಸಕಾರಾತ್ಮಕ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅಂಶುಮಂತ್ ಭರವಸೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಪೋಷಕರು ಮಕ್ಕಳನ್ನು ಶಾಲೆಗೆ ಕಳಿಸಲು ಮುಂದಾಗಿದ್ದಾರೆ.
PublicNext
17/06/2026 12:45 pm
LOADING...