ಚಿಕ್ಕಮಗಳೂರು : ಸ್ವಾತಂತ್ರ್ಯ ಪೂರ್ವದಿಂದ 2004ರ ತನಕ ಚಿಕ್ಕಮಗಳೂರು ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ನಡೆದಿರಲಿಲ್ಲ ಎಂದು ಬಿಜೆಪಿ ಜಿಲ್ಲಾ ಎಸ್ಸಿ ಘಟಕದ ಅಧ್ಯಕ್ಷ ಕುರುವಂಗಿ ವೆಂಕಟೇಶ್ ಅವರು ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ.
2004ರಿಂದ 2023ರ ವರೆಗೆ ಸಿ.ಟಿ. ರವಿ ಅವರು ಶಾಸಕರಾಗಿದ್ದ ಅವಧಿಯಲ್ಲಿ ಕ್ಷೇತ್ರದಲ್ಲಿ ಅಭೂತಪೂರ್ವ ಬದಲಾವಣೆಗಳಾಗಿವೆ ಎಂದು ನೆನಪಿಸಿಕೊಂಡಿದ್ದಾರೆ. ಇಂದು ಕಾಂಗ್ರೆಸ್ಸಿಗರು ಓಡಾಡುತ್ತಿರುವ ರಸ್ತೆಗಳು, ಭವನಗಳು ಹಾಗೂ ದೇವಸ್ಥಾನಗಳು ಸಿ.ಟಿ. ರವಿ ಅವರ ಅವಧಿಯಲ್ಲಿ ನಿರ್ಮಾಣವಾಗಿರುವಂತದ್ದಾಗಿದ್ದು, ದಲಿತ ಕಾಲೋನಿಗಳಿಗೆ ಬೋರ್‌ವೆಲ್, ಸಂಘ-ಸಂಸ್ಥೆಗಳಿಗೆ ಸಾಲ ಸೌಲಭ್ಯ, ವಾಹನಗಳು ಹಾಗೂ ವೈಯಕ್ತಿಕ ನೆರವು ನೀಡುವ ಮೂಲಕ ಎಲ್ಲರನ್ನೂ ಸಮಾನತೆಯಿಂದ ನಡೆಸಿಕೊಂಡ ಕೀರ್ತಿ ಸಿ.ಟಿ. ರವಿ ಅವರಿಗೆ ಸಲ್ಲುತ್ತದೆ ಎಂದು ಶ್ಲಾಘಿಸಿದ್ದಾರೆ.
ಇದೇ ವೇಳೆ 2023ರಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದ ಅವರು, ದಲಿತರಿಗೆ ಅಧಿಕಾರ ಕೇಳಿದರೆ "ಅವರಿಗೆ ಅಧಿಕಾರ ಕೊಟ್ಟರೆ ರಾಜಾರೋಷವಾಗಿ ಓಡಾಡಲು ಬಿಡುವುದಿಲ್ಲ" ಎನ್ನುವ ಧೋರಣೆಯನ್ನು ಕಾಂಗ್ರೆಸ್ ನಾಯಕರು ಹೊಂದಿದ್ದಾರೆ ಎಂದು ಆರೋಪಿಸಿದರು. ದಲಿತರನ್ನು ಅಧಿಕಾರದಿಂದ ವಂಚಿಸುತ್ತಿರುವ ಈ ದಲಿತ ವಿರೋಧಿ ಸರ್ಕಾರದ ಶಾಸಕರ ಮನೆ ಮುಂದೆ ಕಾಂಗ್ರೆಸ್ಸಿಗರು ಪ್ರತಿಭಟನೆ ನಡೆಸಬೇಕೇ ಹೊರತು ಬಿಜೆಪಿಯನ್ನಲ್ಲ ಎಂದು ಸವಾಲು ಹಾಕಿದ್ದಾರೆ.
ತಮ್ಮ ಶಾಸಕರ ಅವಧಿಯಲ್ಲಿ ಯಾವುದೇ ದಲಿತ ಕಾಲೋನಿಗಳು ಅಭಿವೃದ್ಧಿ ಹೊಂದಿಲ್ಲ ಎನ್ನುವುದನ್ನು ಅರಿತು ಅಲ್ಲಿ ಪ್ರತಿಭಟಿಸಿದರೆ ಮಾತ್ರ ದಲಿತರು ಇವರನ್ನು ಒಪ್ಪಿಕೊಳ್ಳುತ್ತಾರೆ ಎಂದ ಅವರು, ಮುಂಬರುವ ದಿನಗಳಲ್ಲಿ ರಾಜ್ಯದ ಹಾಗೂ ಕ್ಷೇತ್ರದ ದಲಿತರು ಮತ್ತು ಸಾರ್ವಜನಿಕರು ಈ ಸರ್ಕಾರಕ್ಕೆ ತಕ್ಕ ಪಾಠ ಕಲಿಸುವುದು ನಿಶ್ಚಿತ ಎಂದು ಎಚ್ಚರಿಸಿದ್ದಾರೆ.
PublicNext
19/06/2026 05:31 pm
LOADING...