ಚಿಕ್ಕಮಗಳೂರು: ಕೆಪಿಸಿಸಿ ನೂತನ ಅಧ್ಯಕ್ಷರಾಗಿ ನೇಮಕಗೊಂಡಿರುವ ಬಿ.ಕೆ. ಹರಿಪ್ರಸಾದ್ ಭಾನುವಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅಧಿಕಾರ ಸ್ವೀಕರಿಸಲಿದ್ದು, ಈ ಸಮಾರಂಭದಲ್ಲಿ ಜಿಲ್ಲೆಯಿಂದ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಪಿ. ಹರಿಪ್ರಸಾದ್ ತಿಳಿಸಿದ್ದಾರೆ.
ಬಿ.ಕೆ. ಹರಿಪ್ರಸಾದ್ ಅವರು ವಿದ್ಯಾರ್ಥಿ ಜೀವನದಿಂದಲೇ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡು, ಐದು ದಶಕಗಳಿಂದ ಪಕ್ಷದ ಕೆಳ ಹಂತದಿಂದ ಎಐಸಿಸಿ ಪ್ರಧಾನ ಕಾರ್ಯದರ್ಶಿಯವರೆಗೆ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ. ನಾಲ್ಕು ದಶಕಗಳಿಗೂ ಹೆಚ್ಚು ಕಾಲ ರಾಜ್ಯಸಭೆ ಹಾಗೂ ವಿಧಾನ ಪರಿಷತ್ ಸದಸ್ಯರಾಗಿ ಕೆಲಸ ಮಾಡಿರುವ ಇಂತಹ ಹಿರಿಯ ನಾಯಕರ ನೇಮಕ ತಮಗೆಲ್ಲರಿಗೂ ಸಂತಸ ತಂದಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಹರ್ಷ ವ್ಯಕ್ತಪಡಿಸಿದ್ದಾರೆ.
ಈ ಪದಗ್ರಹಣ ಸಮಾರಂಭದಲ್ಲಿ ಶಾಸಕರು ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ನೇತೃತ್ವದಲ್ಲಿ ಆಯಾ ವಿಧಾನಸಭಾ ಕ್ಷೇತ್ರದ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ನಾಮನಿರ್ದೇಶಿತ ಸದಸ್ಯರು ಪಾಲ್ಗೊಳ್ಳಲಿದ್ದಾರೆ. ಇದೇ ವೇಳೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಧಿಕಾರ ವಹಿಸಿಕೊಂಡ ಮೊದಲ ಸಂಪುಟ ಸಭೆಯಲ್ಲೇ ಮಹತ್ತರ ಘೋಷಣೆಗಳನ್ನು ಮಾಡುವ ಮೂಲಕ ರಾಜ್ಯದ ವಿದ್ಯಾರ್ಥಿಗಳು, ಯುವಕರು ಮತ್ತು ಜನಸಾಮಾನ್ಯರ ಪರವಾದ ಆಡಳಿತದ ಮುನ್ಸೂಚನೆ ನೀಡಿದ್ದಾರೆ ಎಂದು ಶ್ಲಾಘಿಸಿದ ಅವರು, ಮುಂದಿನ ದಿನಗಳಲ್ಲಿ ಜಿಲ್ಲೆಯ ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ ಜಿಲ್ಲೆಯ ಪ್ರಮುಖ ವಿಚಾರಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು ಎಂದು ಹೇಳಿದ್ದಾರೆ.
Kshetra Samachara
20/06/2026 10:20 am
LOADING...