ಗದಗ: 2023ರಲ್ಲಿ 'ಸರ್ವ ಜನಾಂಗದ ಶಾಂತಿಯ ತೋಟ', ಸಾಮಾಜಿಕ ನ್ಯಾಯ ಮತ್ತು ಗ್ಯಾರಂಟಿ ಯೋಜನೆಗಳ ಭರವಸೆಯೊಂದಿಗೆ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದ್ದ ಕಾಂಗ್ರೆಸ್ ಸರ್ಕಾರ ಈಗ ಮೂರು ವರ್ಷಗಳನ್ನು ಪೂರೈಸಿದೆ. ಈ ಅವಧಿಯಲ್ಲಿ ಮುಖ್ಯಮಂತ್ರಿ ಬದಲಾವಣೆಯಾಗಿ ಅಧಿಕಾರ ಹಸ್ತಾಂತರ ಪ್ರಕ್ರಿಯೆ ಕೂಡ ಮುಗಿದಿದೆ. ಆದರೆ, ಕಳೆದ ಮೂರು ವರ್ಷಗಳ ಹಿಂದೆ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಸ್ಲಂ ಜನರಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಸ್ಲಂ ಜನಾಂದೋಲನ ಕರ್ನಾಟಕ ರಾಜ್ಯ ಸಂಚಾಲಕ ಎ.ನರಸಿಂಹಮೂರ್ತಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗದಗ ನಗರದಲ್ಲಿ ಜೂನ್ 20 ರಂದು ಸ್ಲಂ ಜನಾಂದೋಲನ ಕರ್ನಾಟಕದಿಂದ ಹಮ್ಮಿಕೊಂಡಿರುವ ರಾಜ್ಯ ಪ್ರತಿನಿಧಿಗಳ ಸಮ್ಮೇಳನ ಕುರಿತು ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, "ಇಂದು ಕಾಂಗ್ರೆಸ್ ಸರ್ಕಾರದ ಮೇಲೆ ಇಟ್ಟಿದ್ದ ನಿರೀಕ್ಷೆಗಳು ಭ್ರಮನಿರಸನಗೊಳ್ಳುತ್ತಿವೆ," ಎಂದು ಹೇಳಿದರು.
ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮೂರು ವರ್ಷಗಳ ಅವಧಿ ಪೂರ್ಣಗೊಳಿಸಿದ ಸಂದರ್ಭದಲ್ಲಿ ತುಮಕೂರಿನಲ್ಲಿ ಸಾಧನೆಗಳ ಸಮರ್ಪಣೆ ಮತ್ತು ಸಂಕಲ್ಪ ಸಮಾವೇಶವನ್ನು ನಡೆಸಿತ್ತು. 'ಸರ್ವ ಜನಾಂಗದ ಶಾಂತಿಯ ತೋಟ' ಪ್ರಣಾಳಿಕೆಯಲ್ಲಿ ಪಂಚ ಗ್ಯಾರಂಟಿಗಳೊಂದಿಗೆ 580 ಭರವಸೆಗಳನ್ನು ನೀಡಿದ್ದು, ಅದರಲ್ಲಿ 290 ಭರವಸೆಗಳನ್ನು ಈಗಾಗಲೇ ಈಡೇರಿಸಿರುವುದಾಗಿ ಮತ್ತು ಉಳಿದ ಭರವಸೆಗಳನ್ನು ಮುಂದಿನ ಎರಡು ವರ್ಷಗಳಲ್ಲಿ ಈಡೇರಿಸುವುದಾಗಿ ಸರ್ಕಾರ ಹೇಳಿದೆ. ಆದರೆ, ಸರ್ಕಾರ ಎರಡನೇ ವರ್ಷದ ವಿಜಯನಗರ ಘೋಷಣೆಯಂತೆ ಭೂ ಗ್ಯಾರಂಟಿ ಅಡಿಯಲ್ಲಿ 1.84 ಲಕ್ಷ ಹಕ್ಕುಪತ್ರಗಳನ್ನು ನೀಡಿರುವುದಾಗಿ ಮಾಜಿ ಸಚಿವ ಜಮೀರ್ ಅಹ್ಮದ್ ಹೇಳಿಕೆ ನೀಡಿದ್ದರೂ, ಕಳೆದ ಮೂರು ವರ್ಷಗಳಲ್ಲಿ ಕೇವಲ 64 ಸಾವಿರ ಹಕ್ಕುಪತ್ರಗಳನ್ನು ಮಾತ್ರ ನೀಡಲಾಗಿದೆ ಎಂದು ನರಸಿಂಹಮೂರ್ತಿ ಆಕ್ಷೇಪ ವ್ಯಕ್ತಪಡಿಸಿದರು.
ಕೋಮು ಸೌಹಾರ್ದ, ಸಾಮಾಜಿಕ ನ್ಯಾಯ, ಬಡವರ ಕಲ್ಯಾಣ, ಗ್ಯಾರಂಟಿ ಯೋಜನೆಗಳು ಮತ್ತು ಜನಪರ ಅಭಿವೃದ್ಧಿಯ ಭರವಸೆಗಳನ್ನು ನೀಡಿದ್ದ ಸಿದ್ದರಾಮಯ್ಯ ಸರ್ಕಾರ, ಕಳೆದ ಮೂರು ವರ್ಷಗಳಲ್ಲಿ ನಿರೀಕ್ಷೆಗೂ ಮೀರಿದ ವಚನಭಂಗಗಳನ್ನು ಮಾಡಿದೆ ಎಂದು ಎ.ನರಸಿಂಹಮೂರ್ತಿ ದೂರಿದರು.
Kshetra Samachara
17/06/2026 04:32 pm