ಗದಗ : ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿ ಹದಗೆಟ್ಟ ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ-ಮೂತ್ರಾಲಯಗಳ ಅವ್ಯವಸ್ಥೆ ಹಾಗೂ ಬೀದಿ ದೀಪಗಳ ಕೊರತೆ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವಲ್ಲಿ ಸ್ಥಳೀಯ ಪುರಸಭೆಯ ವೈಫಲ್ಯವನ್ನು ಖಂಡಿಸಿ ನಾಗರಿಕರು ಪ್ರತಿಭಟನೆ ನಡೆಸಿದರು.
ಮಂಜುನಾಥ ಮಾಗಡಿ ಅವರ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ, ನಾಗರಿಕರು ಖಾಲಿ ಕೊಡಗಳು, ಕಸಬರಿಗೆಗಳು ಮತ್ತು ಜಾನುವಾರುಗಳೊಂದಿಗೆ ಪುರಸಭೆಗೆ ಆಗಮಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾಕಾರರು ಪುರಸಭೆಯ ಆವರಣದಲ್ಲಿ ಹಲಗಿ ಬಾರಿಸುತ್ತಾ, ಖಾಲಿ ಕೊಡಗಳನ್ನು ಪ್ರದರ್ಶಿಸುತ್ತಾ, ಹಾಗೂ ಪುರಸಭೆಯ ವೈಫಲ್ಯಗಳನ್ನು ಎತ್ತಿ ತೋರಿಸುವ ಭಿತ್ತಿಪತ್ರಗಳನ್ನು ಹಿಡಿದು ಧರಣಿ ಆರಂಭಿಸಿದರು.
ಕಳೆದ ಎರಡು ತಿಂಗಳಿಂದ ಕುಡಿಯುವ ನೀರಿಗಾಗಿ ಪರಿತಪಿಸುತ್ತಿದ್ದರೂ ಕ್ಯಾರೆ ಎನ್ನದ ಪುರಸಭೆಯು, ಪ್ರತಿಭಟನೆಯ ಸುಳಿವು ಸಿಗುತ್ತಿದ್ದಂತೆಯೇ ಎಚ್ಚೆತ್ತು ನೀರು ಬಿಟ್ಟಿತು. ಇದರಿಂದ ಮತ್ತಷ್ಟು ಕೆರಳಿದ ನಾಗರಿಕರು, "ಸೌಲಭ್ಯಗಳನ್ನು ಪಡೆಯಲು ನಾವು ಬೀದಿಗಿಳಿಯಬೇಕೇ? ನಿಮ್ಮ ಕರ್ತವ್ಯವನ್ನು ಸರಿಯಾಗಿ ನಿಭಾಯಿಸಿದ್ದರೆ ನಾವು ಏಕೆ ಪ್ರತಿಭಟನೆ ಮಾಡುತ್ತಿದ್ದೆವು?" ಎಂದು ಆಕ್ರೋಶದಿಂದ ಪ್ರಶ್ನಿಸಿದರು.
PublicNext
17/06/2026 06:35 pm
LOADING...