ಸಿದ್ದಾಪುರ: ತಾಲೂಕಿನ ನಾಣಿಕಟ್ಟಾದ ದಲಿತ ಸಮುದಾಯದ ನಾಗರಾಜ ಚೆನ್ನಯ್ಯ ಎಂಬ ಅಮಾಯಕ ವ್ಯಕ್ತಿಯ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ಮಾರಣಾಂತಿಕ ಹಲ್ಲೆ ನಡೆಸಿರುವುದನ್ನು ಅಖಿಲ ಕರ್ನಾಟಕ ಚೆನ್ನಯ್ಯ ಸಮಾಜ ಅಭಿವೃದ್ಧಿ ಹೋರಾಟ ಸಮಿತಿ ಕರ್ನಾಟಕ ತೀವ್ರವಾಗಿ ಖಂಡಿಸಿದೆ. ಈ ಕೃತ್ಯದಲ್ಲಿ ಭಾಗಿಯಾದ ತಪ್ಪಿತಸ್ಥ ಎಲ್ಲ ಅಧಿಕಾರಿಗಳನ್ನು ಕೂಡಲೇ ಅಮಾನತ್ತುಗೊಳಿಸಿ, ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಂಘದ ರಾಜ್ಯಾಧ್ಯಕ್ಷ ಬಸವರಾಜ ದೊಡ್ಮನಿ ಆಗ್ರಹಿಸಿದ್ದಾರೆ.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಕೂಡಲೇ ಕಾನೂನು ಕ್ರಮ ಕೈಗೊಳ್ಳದಿದ್ದರೆ ಮುಂದಿನ ನಾಲ್ಕು ದಿನಗಳಲ್ಲಿ ಉಗ್ರ ಹೋರಾಟಕ್ಕೆ ಕರೆ ನೀಡಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಕಡು ಬಡತನದಲ್ಲಿ ಜೀವನ ಸಾಗಿಸುತ್ತಿರುವ ಪರಿಶಿಷ್ಟ ಜಾತಿಯ ಚೆನ್ನಯ್ಯ ಜಾತಿಗೆ ಸೇರಿದ ನಾಗರಾಜ ಚೆನ್ನಯ್ಯ, ಜೂನ್ 11ರಂದು ಎಂದಿನಂತೆ ಕೂಲಿ ಕೆಲಸ ಮುಗಿಸಿ ಮನೆಗೆ ಬಂದಿದ್ದರು. ರಾತ್ರಿ ಸುಮಾರು 10 ಗಂಟೆ ಸುಮಾರಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಅವರ ಮನೆಗೆ ನುಗ್ಗಿ ವಿಚಾರಣೆ ನೆಪದಲ್ಲಿ ಕರೆದೊಯ್ದಿದ್ದಾರೆ. ಅಲ್ಲಿ ನಾಗರಾಜನಿಗೆ ಅವಾಚ್ಯವಾಗಿ ನಿಂದಿಸಿ, ಮನಬಂದಂತೆ ಥಳಿಸಿ, ಜಾತಿ ನಿಂದನೆ ಮಾಡಿದ್ದಾರೆ.
ಕಡವೆ ಕೊಂದಿದ್ದು ನೀನೇ ಎಂದು ಒಪ್ಪಿಕೊಳ್ಳುವಂತೆ ಒತ್ತಾಯಿಸಿ, ಇಲ್ಲವಾದರೆ ಸುಳ್ಳು ಕೇಸು ಹಾಕಿ ಜೈಲಿಗೆ ಕಳಿಸುವುದಾಗಿ ಬೆದರಿಸಿದ್ದಾರೆ. ಈ ದೈಹಿಕ ಹಾಗೂ ಮಾನಸಿಕ ಹಿಂಸೆಯಿಂದ ನಾಗರಾಜ ಪ್ರಜ್ಞೆ ತಪ್ಪಿ ಅಸ್ವಸ್ಥಗೊಂಡಿದ್ದಾರೆ.
ನಾಗರಾಜ ಪ್ರಜ್ಞೆ ತಪ್ಪಿದ್ದನ್ನು ಕಂಡು ಗಾಬರಿಗೊಂಡ ಅಧಿಕಾರಿಗಳು, ಅವರನ್ನು ಸಿರ್ಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಕಾರವಾರ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿ ನಂತರ ಅವರ ಮನೆಗೆ ಬಿಟ್ಟು ಹೋಗಿದ್ದಾರೆ. ಅರಣ್ಯ ಇಲಾಖೆಯ ಅಧಿಕಾರಿಗಳ ಈ ಕೃತ್ಯ ಅಮಾನವೀಯತೆಯ ಪರಮಾವಧಿ ಎಂದು ಸಂಘಟನೆ ಆಕ್ರೋಶ ವ್ಯಕ್ತಪಡಿಸಿದೆ.
ಈ ಘಟನೆಗೆ ಕಾರಣರಾದ ಎಲ್ಲಾ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ತಕ್ಷಣ ಕಾನೂನು ಕ್ರಮ ಕೈಗೊಂಡು ಅವರನ್ನು ಬಂಧಿಸಬೇಕು ಹಾಗೂ ಕೆಲಸದಿಂದ ವಜಾಗೊಳಿಸಬೇಕು. ಈ ಘಟನೆ ಹಿಂದೆ ಬೇರೆ ಯಾವುದೇ ಅಧಿಕಾರಿಗಳ ಕೈವಾಡವಿದ್ದರೂ ಅವರ ವಿರುದ್ಧವೂ ಸೂಕ್ತ ಕ್ರಮ ಜರುಗಿಸಬೇಕು. ಘಟನೆಯ ಸತ್ಯಾಸತ್ಯತೆ ಹೊರಬರಬೇಕು. ನಾಗರಾಜ ಚೆನ್ನಯ್ಯ ಕುಟುಂಬದ ನಿರ್ವಹಣೆಗಾಗಿ ಇಲಾಖೆ ಆರ್ಥಿಕ ನೆರವು ನೀಡಬೇಕು. ಯಾವುದೇ ಸಾಕ್ಷಿ ಆಧಾರಗಳು ನಾಶವಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ದೊಡ್ಮನಿ ಒತ್ತಾಯಿಸಿದರು.
ನಂತರ ತಹಶೀಲ್ದಾರ್ ಮೂಲಕ ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗದ ಪ್ರಾದೇಶಿಕ ರಾಜ್ಯ ಕಚೇರಿ, ಕರ್ನಾಟಕ ರಾಜ್ಯ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು, ಗೃಹ ಸಚಿವರು ಮತ್ತು ಅರಣ್ಯ ಸಂರಕ್ಷಣಾಧಿಕಾರಿಗಳು, ಬೆಂಗಳೂರು ಇವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಗುಲ್ಬರ್ಗ ವಿಭಾಗೀಯ ಅಧ್ಯಕ್ಷ ಮಂಜಪ್ಪ ಹಸುವಂತೆ, ಸಿದ್ದಾಪುರ ತಾಲೂಕು ಅಧ್ಯಕ್ಷ ಶಿವರಾಂ ಬಳ್ಳಟ್ಟೆ, ಸಿರ್ಸಿ ತಾಲೂಕು ಅಧ್ಯಕ್ಷ ಸದಾನಂದ ಚೆನ್ನಯ್ಯ ತಿಗಣಿ, ಸಮಾಜದ ಪ್ರಮುಖರಾದ ಲೋಕೇಶ್ ಚೆನ್ನಯ್ಯ, ಪ್ರಶಾಂತ ಹಲಗೇರಿ, ಮಂಜುನಾಥ ಹಲಗೇರಿ, ಗೋಪಾಲ ಹಲಗೇರಿ, ಬಸವರಾಜ ಹುಸೂರ್, ವೀರಭದ್ರ ಹಲಗೇರಿ, ಯಶವಂತ ಹಲಗೇರಿ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
17/06/2026 06:35 pm