ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭಟ್ಕಳ : ಹೆರಿಗೆ ವೈದ್ಯರ ಕೊರತೆಯಿಂದ ತಾಲೂಕು ಆರೋಗ್ಯ ವ್ಯವಸ್ಥೆ ICUಗೆ - ಬಡ ಕುಟುಂಬಗಳ ಆತಂಕ ಹೆಚ್ಚಳ

ಭಟ್ಕಳ: ತಾಲೂಕಿನ ಗ್ರಾಮೀಣ ಭಾಗದ ಬಡವರು, ಕೂಲಿ ಕಾರ್ಮಿಕರು ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ಆರೋಗ್ಯ ಸೇವೆಯ ಪ್ರಮುಖ ಕೇಂದ್ರವಾಗಿದ್ದ ಶಿರಾಲಿ ಸಮುದಾಯ ಆರೋಗ್ಯ ಕೇಂದ್ರ ತಜ್ಞ ವೈದ್ಯರ ಕೊರತೆಯಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದೆ.

ಕಳೆದ ಹಲವು ವರ್ಷಗಳಿಂದ ಸಾವಿರಾರು ಜನರಿಗೆ ಹೆರಿಗೆ ಹಾಗೂ ತುರ್ತು ಚಿಕಿತ್ಸಾ ಸೇವೆ ನೀಡುತ್ತಿದ್ದ ಆಸ್ಪತ್ರೆಯಲ್ಲಿ ಪ್ರಮುಖ ವೈದ್ಯರ ವರ್ಗಾವಣೆಯ ನಂತರ ಸೇವೆಗಳ ಮೇಲೆ ಗಂಭೀರ ಪರಿಣಾಮ ಉಂಟಾಗಿದೆ.

ಭಟ್ಕಳ ತಾಲೂಕು ಆಸ್ಪತ್ರೆಯಲ್ಲಿಯೂ ವೈದ್ಯರ ಕೊರತೆ ಮುಂದುವರಿದಿದ್ದು, 15 ವೈದ್ಯರ ಹುದ್ದೆಗಳ ಪೈಕಿ ಕೇವಲ 9 ಮಂದಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಕಳೆದ ಒಂದೂವರೆ ವರ್ಷಗಳಿಂದ ಸ್ತ್ರೀರೋಗ ತಜ್ಞರ ಹುದ್ದೆ ಖಾಲಿ ಇರುವುದರಿಂದ ಆಸ್ಪತ್ರೆಯಲ್ಲಿ ನಡೆಯುತ್ತಿದ್ದ ಹೆರಿಗೆಗಳ ಸಂಖ್ಯೆ ಗಣನೀಯವಾಗಿ ಕುಸಿದಿದೆ. ಮಾಸಿಕವಾಗಿ 60ರಿಂದ 70 ಹೆರಿಗೆಗಳು ನಡೆಯುತ್ತಿದ್ದ ಆಸ್ಪತ್ರೆಯಲ್ಲಿ ಈಗ ಹೆರಿಗೆ ಸೇವೆ ಬಹುತೇಕ ಸ್ಥಗಿತಗೊಂಡಂತಾಗಿದೆ. ಕಣ್ಣಿನ ವೈದ್ಯರ ಕೊರತೆಯೂ ಇದ್ದು, ತುರ್ತು ಚಿಕಿತ್ಸಾ ವಿಭಾಗದ ನಾಲ್ಕು ವೈದ್ಯ ಹುದ್ದೆಗಳು ಖಾಲಿಯಾಗಿವೆ.

ಇತ್ತೀಚೆಗೆ ನಿಯಮದ ಪ್ರಕಾರ ಹೆಚ್ಚುವರಿ ಅರಿವಳಿಕೆ ತಜ್ಞರನ್ನು ನೇಮಿಸಬೇಕಾಗಿದ್ದರೂ ಆ ಹುದ್ದೆಯೂ ಭರ್ತಿಯಾಗಿಲ್ಲ. ಆಸ್ಪತ್ರೆಯಲ್ಲಿ 18 ದಾದಿಯರ ಹುದ್ದೆಗಳ ಪೈಕಿ 7 ಹುದ್ದೆಗಳು ಖಾಲಿ ಇವೆ. ಪ್ರಯೋಗಾಲಯ ಹಾಗೂ ಔಷಧ ವಿತರಣಾ ವಿಭಾಗಗಳಲ್ಲಿ ತಲಾ ಎರಡು ಹುದ್ದೆಗಳು ಭರ್ತಿಯಾಗದೇ ಉಳಿದಿದ್ದು, ಕಚೇರಿ ಸಿಬ್ಬಂದಿಯ ಏಳು ಹುದ್ದೆಗಳಲ್ಲಿ ಐದು ಹುದ್ದೆಗಳು ಖಾಲಿ ಇರುವ ಕಾರಣ ಬೇರೆ ವಿಭಾಗಗಳಿಂದ ಸಿಬ್ಬಂದಿಯನ್ನು ನಿಯೋಜಿಸಿ ಕೆಲಸ ನಿರ್ವಹಿಸಲಾಗುತ್ತಿದೆ. ಹಲವು ವೈದ್ಯರು ಬೇರೆಡೆಗೆ ವರ್ಗಾವಣೆಯಾಗಿರುವುದರಿಂದ ಆಸ್ಪತ್ರೆಯ ಹೆರಿಗೆ ಹಾಗೂ ತುರ್ತು ಚಿಕಿತ್ಸಾ ಸೇವೆಗಳ ಮೇಲೆ ನೇರ ಪರಿಣಾಮ ಬಿದ್ದಿದೆ.

ಭಟ್ಕಳ ಸುತ್ತಮುತ್ತಲಿನ ಗ್ರಾಮಗಳ ಗರ್ಭಿಣಿಯರು ಚಿಕಿತ್ಸೆಗಾಗಿ ಈ ಆಸ್ಪತ್ರೆಯನ್ನೇ ಅವಲಂಬಿಸಿದ್ರು.. ಇದೀಗ ಗರ್ಭಿಣಿಯರು ಹಾಗೂ ಮಹಿಳೆಯರು ಚಿಕಿತ್ಸೆಗಾಗಿ ಹೊನ್ನಾವರ ಅಥವಾ ಖಾಸಗಿ ಆಸ್ಪತ್ರೆಗಳತ್ತ ಮುಖ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ಹೆಚ್ಚುವರಿ ವೆಚ್ಚದ ಹೊರೆ ಎದುರಾಗುವ ಆತಂಕ ವ್ಯಕ್ತವಾಗಿದೆ.

ಭಟ್ಕಳ ತಾಲೂಕು ಆಸ್ಪತ್ರೆ ಮತ್ತು ಶಿರಾಲಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಖಾಲಿ ಇರುವ ತಜ್ಞ ವೈದ್ಯರ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡಿ ಹೆರಿಗೆ ಸೇವೆಯನ್ನು ಪುನರಾರಂಭಿಸಬೇಕು ಎಂದು ಸ್ಥಳೀಯರು, ಹಾಗೂ ವಿವಿಧ ಸಂಘಟನೆಗಳು ಸರ್ಕಾರ ಹಾಗೂ ಆರೋಗ್ಯ ಇಲಾಖೆಯನ್ನು ಆಗ್ರಹಿಸಿವೆ.

Edited By : Manjunath H D
PublicNext

PublicNext

20/06/2026 05:39 pm

Cinque Terre

1.94 K

Cinque Terre

0

ಸಂಬಂಧಿತ ಸುದ್ದಿ