ಹೈದರಾಬಾದ್: ನಾವು ಮಾಡುವ ಪ್ರಾಮಾಣಿಕ ಕೆಲಸ ಯಾವುದೂ ಚಿಕ್ಕದಲ್ಲ" ಎಂಬುದನ್ನು ಇಂದಿನ ಯುವ ಪೀಳಿಗೆಗೆ ಸಾಬೀತುಪಡಿಸಿದ್ದಾರೆ ಹೈದರಾಬಾದ್ ಮೂಲದ ಬಿಬಿಎ ವಿದ್ಯಾರ್ಥಿನಿ ಎಂ. ಬಿಂದುಪ್ರಿಯಾ. ಸಮಾಜದ ಕಟ್ಟುಪಾಡುಗಳನ್ನು ಮುರಿದು, ತಂದೆಯ ಕ್ಷೌರಿಕ ವೃತ್ತಿಯನ್ನು ಹೆಮ್ಮೆಯಿಂದ ಮುಂದುವರಿಸಿಕೊಂಡು ಹೋಗುತ್ತಿರುವ ಈಕೆಯ ಸಾಧನೆ ಯುವಜನರಿಗೆ ಪ್ರೇರಣೆ...
ಒಂದೆಡೆ ಪದವಿ ವ್ಯಾಸಂಗ, ಮತ್ತೊಂದೆಡೆ ತಂದೆಯ ವೃತ್ತಿಗೆ ಆಸರೆಯಾಗಿ ಸೆಲೂನ್ ಮುನ್ನಡೆಸುತ್ತಿರುವ ಹೈದರಾಬಾದ್‌ನ ಎಂ. ಬಿಂದುಪ್ರಿಯಾ ಅವರ ಸಾಹಸಗಾಥೆ ಈಗ ಎಲ್ಲೆಡೆ ಸದ್ದು ಮಾಡುತ್ತಿದೆ. ಹೈದರಾಬಾದ್ ಸಮೀಪದ ಹಳ್ಳಿಯೊಂದರ ಪ್ರತಿಭೆಯಾದ ಬಿಂದುಪ್ರಿಯಾ ಪ್ರಸ್ತುತ ಬಿಬಿಎ ಓದುತ್ತಿದ್ದಾರೆ. ಆದರೆ, ಈಕೆಯ ದಿನಚರಿ ಉಳಿದ ವಿದ್ಯಾರ್ಥಿಗಳಂತಲ್ಲ. ಕಾಲೇಜು ಮುಗಿದ ನಂತರದ ಬಿಡುವಿನ ಅವಧಿಯಲ್ಲಿ ಈಕೆ ತನ್ನ ತಂದೆಯ ಸೆಲೂನ್ ಅಂಗಡಿಯಲ್ಲಿ ಸ್ವತಃ ಗ್ರಾಹಕರಿಗೆ ಕಟ್ಟಿಂಗ್, ಶೇವಿಂಗ್ ಮಾಡುತ್ತಾ ಆಧಾರವಾಗಿದ್ದಾರೆ.
ಟೀಕೆ ಮೆಟ್ಟಿ ನಿಂತ ಜಾಣೆ
ಇಂದಿಗೂ ಕೆಲವು ಉದ್ಯೋಗಗಳು ಕೇವಲ ಪುರುಷರಿಗೆ ಮಾತ್ರ ಸೀಮಿತ ಎಂಬ ಕಟ್ಟುಪಾಡುಗಳು ಸಮಾಜದಲ್ಲಿವೆ. ಹೆಣ್ಣುಮಗಳೊಬ್ಬಳು ಸೆಲೂನ್ ಉದ್ಯೋಗಕ್ಕೆ ಇಳಿದಾಗ ಆರಂಭದಲ್ಲಿ ಸಮಾಜದಿಂದ ಅಪಹಾಸ್ಯ, ಕಟು ಟೀಕೆಗಳು ಮತ್ತು ಚುಚ್ಚುಮಾತುಗಳು ಕೇಳಿಬಂದಿದ್ದವು. ಆದರೆ, ಬಿಂದುಪ್ರಿಯಾ ಯಾವುದಕ್ಕೂ ಧೃತಿಗೆಡಲಿಲ್ಲ. ನೆಗೆಟಿವ್ ಮಾತುಗಳನ್ನು ಗಾಳಿಗೆ ತೂರಿದ ಆಕೆ, ಕುಟುಂಬದ ಜವಾಬ್ದಾರಿ ಹಾಗೂ ಸ್ವಾವಲಂಬಿ ಬದುಕಿಗೆ ಮೊದಲ ಆದ್ಯತೆ ನೀಡಿದರು.
ಹೆಣ್ಣುಮಕ್ಕಳಿಗೆ ರೋಲ್ ಮಾಡೆಲ್
ಯಾವ ಕೆಲಸವೂ ಮೇಲಲ್ಲ, ಯಾವುದೂ ಕೀಳಲ್ಲ ಎಂಬುದನ್ನು ಬಿಂದುಪ್ರಿಯಾ ಪ್ರಾಯೋಗಿಕವಾಗಿ ಸಾಬೀತುಪಡಿಸಿದ್ದಾರೆ. ಕಠಿಣ ಪರಿಶ್ರಮ ಮತ್ತು ಪ್ರಾಮಾಣಿಕತೆಗೆ ಸಮಾಜದಲ್ಲಿ ಗೌರವ ಸಿಕ್ಕೇ ಸಿಗುತ್ತದೆ ಎಂಬುದು ಈಕೆಯ ನಂಬಿಕೆ. ಒಂದು ಕಡೆ ಕುಟುಂಬಕ್ಕೆ ಆರ್ಥಿಕ ಆಸರೆಯಾಗುತ್ತಾ, ಮತ್ತೊಂದು ಕಡೆ ತನ್ನ ಉಜ್ವಲ ಭವಿಷ್ಯಕ್ಕಾಗಿ ಬಿಬಿಎ ಓದುತ್ತಿರುವ ಈಕೆಯ ಮಲ್ಟಿ ಟಾಸ್ಕಿಂಗ್ ಗುಣ ನಿಜಕ್ಕೂ ಅದ್ಭುತ. ಸಮಾಜದ ಹಳೇ ಮನಸ್ಥಿತಿಯ ಚೌಕಟ್ಟನ್ನು ಮುರಿದು ಮುನ್ನುಗ್ಗುತ್ತಿರುವ ಬಿಂದುಪ್ರಿಯಾ, ದೇಶದ ಕೋಟ್ಯಂತರ ಹೆಣ್ಣುಮಕ್ಕಳಿಗೆ ಇಂದು ಬಹುದೊಡ್ಡ ರೋಲ್ ಮಾಡೆಲ್ ಆಗಿದ್ದಾರೆ.
-ಮನೋಜ್ ಕೆ.ಬೆಂಗ್ರೆ, ಮಂಗಳೂರು
PublicNext
18/06/2026 09:44 am