ಮೈಸೂರು: ನಿನ್ನೆ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಪಕ್ಷದ ನಾಲ್ವರು ಸದಸ್ಯರು ಅಡ್ಡ ಮತದಾನ ಮಾಡಿದ್ದಾರೆ ಎಂದು ಕೇಂದ್ರ ಸಚಿವ ಹೆಚ್. ಡಿ ಕುಮಾರಸ್ವಾಮಿ ಹೇಳಿದ್ದಾರೆ. "ವಿಧಾನ ಪರಿಷತ್ ಚುನಾವಣೆಯಲ್ಲಿ ನಮ್ಮ ಪಕ್ಷದ ನಾಲ್ವರು ಅಡ್ಡ ಮತದಾನ ಮಾಡಿದ್ದಾರೆ. ಅವರು ಯಾರು ಅಂತಲೂ ಗೊತ್ತಿದೆ. ಹೋಗುವವರೆಲ್ಲಾ ಹೋಗಲಿ, ನನಗೆ ಪಕ್ಷ ಕಟ್ಟುವುದು ಗೊತ್ತಿದೆ. ಯುವಕರನ್ನು ಕರೆ ತಂದು ಪಕ್ಷ ಕಟ್ಟುತ್ತೇನೆ" ಎಂದು ಮೈಸೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪಕ್ಷದ ಆಂತರಿಕ ಸ್ಥಿತಿ ಹಾಗೂ ಭವಿಷ್ಯದ ಕುರಿತು ಹಲವು ಸ್ಫೋಟಕ ವಿಚಾರಗಳನ್ನು ಹಂಚಿಕೊಂಡರು.
ಅಡ್ಡ ಮತದಾನ ಮಾಡಿದವರು ಯಾರು, ಯಾವ ಕಾರಣಕ್ಕೆ ಮಾಡಿದ್ದಾರೆ ಎಂಬ ಬಗ್ಗೆ ನನಗೆ ಸಂಪೂರ್ಣ ಮಾಹಿತಿ ಇದೆ. ಈ ರೀತಿಯ ಅಡ್ಡ ಮತದಾನದ ಬಗ್ಗೆ ಮೊದಲೇ ನಿರೀಕ್ಷೆಯಿತ್ತು. ಆದ್ದರಿಂದ, ಇದು ನನಗೆ ಯಾವುದೇ ಅಚ್ಚರಿ ಅಥವಾ ಆಘಾತ ಉಂಟುಮಾಡಿಲ್ಲ. ಇಂತಹ ಸಂದರ್ಭದಲ್ಲಿ ಕೆಲವರು ಹೇಗೆ ನಡೆದುಕೊಳ್ಳಬಹುದು ಎಂಬುದನ್ನು ತಿಳಿಯುವ ಸಲುವಾಗಿಯೇ ಪಕ್ಷದಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗಿತ್ತು ಎಂದು ಕುಮಾರಸ್ವಾಮಿ ತಿಳಿಸಿದರು. ಅಡ್ಡ ಮತದಾನ ಮಾಡಿದವರು ಈಗಾಗಲೇ ಪಕ್ಷ ಬಿಡುವ ಕುರಿತು ಚರ್ಚೆ ನಡೆಸಿದ್ದಾರೆ ಎಂದೂ ಹೇಳಿದರು.
ಹೊಸ ಮುಖಗಳಿಗೆ ಆದ್ಯತೆ ನೀಡಿ, ಯುವಕರನ್ನು ಕರೆ ತಂದು ಪಕ್ಷ ಕಟ್ಟಲು ತೀರ್ಮಾನಿಸಿದ್ದೇನೆ. ನಮಗೆ ನಿಜವಾದ ಅಗ್ನಿಪರೀಕ್ಷೆ ಇರುವುದು 2028ರ ವಿಧಾನಸಭಾ ಚುನಾವಣೆಯಲ್ಲೇ ಹೊರತು ಈಗಲ್ಲ. ವಾಸ್ತವವಾಗಿ, ಪರಿಷತ್ ಚುನಾವಣೆಗೆ ಅಭ್ಯರ್ಥಿ ನಿಲ್ಲಿಸುವ ಯೋಚನೆ ನಮಗಿರಲಿಲ್ಲ. ಆದರೆ, ಅಭ್ಯರ್ಥಿ ಹಾಕದಿದ್ದರೆ ತಪ್ಪು ಸಂದೇಶ ಹೋಗುತ್ತದೆ ಎಂದು ಕೆಲವು ಶಾಸಕರು ಒತ್ತಾಯಿಸಿದರು. ಚುನಾವಣೆಗಳಲ್ಲಿ ಸೋಲು-ಗೆಲುವು ಸಹಜ. ಹಾಗಾಗಿ ಅಭ್ಯರ್ಥಿಯನ್ನು ಹಾಕಲೇಬೇಕು ಎಂದು ಒತ್ತಾಯಿಸಿದಾಗ, ನನಗೆ ಬೇಕಾಗಿದ್ದು ಕೇವಲ 17 ಮತಗಳು. ಯಾವುದೇ ಕಾರಣಕ್ಕೂ ಅವು ಒಡೆದು ಹೋಗದಂತೆ ನೋಡಿಕೊಳ್ಳಿ ಎಂದು ನಾನು ಹೇಳಿದ್ದೆ. ಏಕೆಂದರೆ, ಈ ಹಿಂದೆ ನನಗೆ ಇಂತಹ ಅನುಭವಗಳಾಗಿವೆ. ಆದರೂ, ‘ಪರೀಕ್ಷೆ ಮಾಡಲೇಬೇಕು, ಯಾರ್ಯಾರು ಯಾವ ರೀತಿ ಇದ್ದಾರೆ? ಗೌರವ ಯಾರಿಟ್ಟಿದ್ದಾರೆ? ಹಿತಶತ್ರುಗಳು ಯಾರಿದ್ದಾರೆ?’ ಎಂಬುದನ್ನು ತಿಳಿಯಲು ಅಭ್ಯರ್ಥಿ ನಿಲ್ಲಿಸಬೇಕೆಂದು ಸಭೆಯಲ್ಲಿ ತೀರ್ಮಾನಿಸಲಾಯಿತು ಎಂದು ಅವರು ವಿವರಿಸಿದರು.
ನಿನ್ನೆಯ ಫಲಿತಾಂಶ ನನಗೆ ಮತ್ತೊಂದು ಅನುಭವ ಕೊಟ್ಟಿದೆ. ಯಾರನ್ನೂ ದೂಷಿಸುವುದಿಲ್ಲ, ಆದರೆ ಕೆಲವರು ಅತಿಯಾಗಿ ನಂಬಿಕೆ ಇಡುವುದು ಸೂಕ್ತವಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಎಂದು ಹೆಚ್.ಡಿ. ಕುಮಾರಸ್ವಾಮಿ ಹೇಳಿದರು.
ಶಾಸಕ ಜಿ. ಟಿ. ದೇವೇಗೌಡರ ವಿಚಾರಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, "ಅವರ ಹೆಸರನ್ನು ನನ್ನ ಮುಂದೆ ಪ್ರಸ್ತಾಪಿಸಬೇಡಿ. ಅದೆಲ್ಲಾ ಮುಗಿದು ಹೋದ ಕಥೆ. ಅವರು ಒಂದು ಕಾಲಿನಲ್ಲಿ ಎರಡು ಕಾಲನ್ನೂ ಹೊರಗಡೆ ಇಟ್ಟಿದ್ದಾರೆ. ಅವರ ಬಗ್ಗೆ ನಾನು ಈ ಹಿಂದೆ ಏನು ಹೇಳಿದ್ದೇನೋ ಅದೇ ಅಂತಿಮ.
ಜಿ.ಟಿ.ಡಿ ವಿಚಾರದಲ್ಲಿ ನನ್ನ ನಿಲುವು ಬಹಳ ಸ್ಪಷ್ಟವಾಗಿದೆ. ದೊಡ್ಡ ಗೌಡರು (ಹೆಚ್.ಡಿ. ದೇವೇಗೌಡರು) ಹೇಳಿದರೂ ಕೂಡ ಪಕ್ಷದ ಹಿತದೃಷ್ಟಿಯಿಂದ ನನ್ನ ನಿಲುವನ್ನು ಬದಲಾಯಿಸಿಕೊಳ್ಳುವುದಿಲ್ಲ. ಈ ಬಾರಿಯ ಟಿಕೆಟ್ ಕುರಿತು ಅಂತಿಮ ನಿರ್ಣಯ ಮಾಡುವುದು ನಾನೇ. ಇದರ ಬಗ್ಗೆ ಯಾವುದೇ ಗೊಂದಲ ಬೇಡ. ಜಿ. ಟಿ. ದೇವೇಗೌಡರು ಯಾವ್ಯಾವಾಗ ಯಾವ ರೀತಿಯ ಆಟ ಆಡಿದ್ದಾರೆ ಎಂಬುದು ನನಗೆ ಗೊತ್ತಿದೆ. ಅವರ ಎಲ್ಲಾ ಪೂರ್ವಪರ ಗೊತ್ತಿದ್ದೇ ಈ ಬಾರಿ ಕಠಿಣ ನಿರ್ಧಾರಕ್ಕೆ ಬಂದಿದ್ದೇನೆ. ಅವರ ಬಗ್ಗೆ ನನ್ನ ಬಳಿ ಚರ್ಚೆ ಮಾಡಲೇಬೇಡಿ. ದೊಡ್ಡ ಗೌಡರಿಗೆ ಜಿ.ಟಿ.ಡಿ ಮೇಲೆ ಪ್ರೀತಿ ವ್ಯಾಮೋಹ ಇರುವುದು ಸತ್ಯ. ಆ ವ್ಯಾಮೋಹವನ್ನೇ ಜಿ.ಟಿ.ಡಿ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಇದಕ್ಕೆ ನಾನು ಅವಕಾಶ ಕೊಡುವುದಿಲ್ಲ" ಎಂದು ಕಟು ಸಂದೇಶ ರವಾನಿಸಿದರು.
PublicNext
19/06/2026 09:44 am