ಗುಂಡ್ಲುಪೇಟೆ : ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಸದ್ಭಳಕೆಯಾಗಬೇಕಿದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಡಿಯಲ್ಲಿ ಕಾರ್ಯನಿರ್ವಹಿಸಬೇಕಿರುವ ಪಟ್ಟಣದ ಸ್ತ್ರೀ ಶಕ್ತಿ ಸಂಕೀರ್ಣದ ಮಳಿಗೆಗಳು ಖಾಸಗಿಯವರ ಪಾಲಾಗಿದ್ದು ಬಾಡಿಗೆ ಹಣದಲ್ಲೂ ಸಹ ಭಾರಿ ಗೋಲ್ಮಾಲ್ ಎಸಗಲಾಗಿದೆ ಎಂದು ವಕೀಲ ಕಾಂತರಾಜು ಗಂಭೀರ ಆರೋಪ ಮಾಡಿದರು. ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ಎಸ್ಸಿ ಎಸ್ಟಿ ಹಿತರಕ್ಷಣಾ ಸಮಿತಿ ಸಭೆಯಲ್ಲಿ ಸಮುದಾಯದ ಮುಖಂಡರು ಸರ್ಕಾರದ ಆಸ್ತಿಯನ್ನ ತಮ್ಮಿಚ್ಛೆಯಂತೆ ಬಳಸಿಕೊಳ್ಳಲು ಒಕ್ಕೂಟಕ್ಕೆ ಪರಮಾಧಿಕಾರ ಕೊಟ್ಟವರು ಯಾರು ಎಂದು ಸಿಡಿಪಿಓ ಹೇಮಾವತಿ ಅವರನ್ನ ಪ್ರಶ್ನಿಸಿದರು.
ಇಲ್ಲಿ ಸ್ತ್ರೀ ಶಕ್ತಿ ಸಂಕೀರ್ಣದ ಉದ್ದೇಶವೇ ಹಳ್ಳ ಹಿಡಿದಿದೆ, ಆರ್ಥಿಕವಾಗಿ ಮಹಿಳೆಯರನ್ನ ಸದೃಢವಾಗಿಸುವ ಸಲುವಾಗಿ ಮಾರುಕಟ್ಟೆ ಕಲ್ಪಿಸಲು ಸ್ತ್ರೀ ಶಕ್ತಿ ಸಂಕೀರ್ಣವನ್ನ ನಿರ್ಮಿಸಿ ಸದ್ಭಳಕೆಗೆ ಹಸ್ತಾಂತರಿಸಿದೆಯೇ ಹೊರತು ಒಕ್ಕೂಟದ ಅಧ್ಯಕ್ಷರಿಗೆ ಕರಾರು ಮಾಡಿಲ್ಲ, ನಿಯಮಾವಳಿಯಂತೆ ಒಕ್ಕೂಟದ ಮಹಿಳೆಯರು ತಯಾರಿಸುವ ಕರಕುಶಲ ವಸ್ತುಗಳು, ಬಟ್ಟೆಗಳು, ಆಹಾರ ಉತ್ಪನ್ನವನ್ನ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಲು ಮಳಿಗೆಗಳನ್ನ ಹಂಚಿಕೆ ಮಾಡಬೇಕೆ ಹೊರತು ವಾಣಿಜ್ಯಕರಣಕ್ಕಲ್ಲ. ಸಂಕೀರ್ಣಗಳನ್ನ ತಮ್ಮಿಚ್ಛೆಯಂತೆ ಅರ್ಹರಲ್ಲದವರಿಗೆ ನೀಡಿರುವ ಒಕ್ಕೂಟದ ಅಧ್ಯಕ್ಷೆ ಹಾಗೂ ಮೇಲುಸ್ತುವಾರಿ ಅಧಿಕಾರಿಗಳು ಕಾನೂನು ಉಲ್ಲಂಘನೆ ಮಾಡಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದು ತರಾಟೆಗೆ ತೆಗೆದುಕೊಂಡರು.
ಬಾಡಿಗೆ ಮಾಹಿತಿ ಎಲ್ಲಾ ಬೋಗಸ್ : ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಎಂಬುದು ಕೇವಲ ಬೂಟಾಟಿಕೆಯಾಗಿದ್ದು ಕಮಿಟಿಯ ಏಕಪಕ್ಷೀಯ ನಡೆಯು ಇಲಾಖೆಯ ನಿಯಮಾವಳಿಗಳನ್ನೆ ಬುಡಮೇಲು ಮಾಡಿದೆ, ಅರ್ಹ ಮಹಿಳಾ ಸ್ವಸಹಾಯ ಸಂಘದ ಸದಸ್ಯರಿಗೆ ದಕ್ಕಬೇಕಿದ್ದ ಮಳಿಗೆಗಳು ಖಾಸಗಿ ಉದ್ಯಮಿಗಳ ಪಾಲಾಗಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಈ ಕುರಿತಾಗಿ ಸಭೆಯಲ್ಲಿ ಒಕ್ಕೂಟದ ಕಾರ್ಯದರ್ಶಿ ಸಿಡಿಪಿಓ ಹೇಮಾವತಿ ಅವರನ್ನ ಪ್ರಶ್ನಿಸಿದರೆ ಸ್ತ್ರೀ ಶಕ್ತಿ ಸಂಕೀರ್ಣ ಸರ್ಕಾರದ ಆಸ್ತಿಯಾದರೂ ಆಡಳಿತದಲ್ಲಿ ನಮ್ಮ ಪಾತ್ರವಿಲ್ಲ , ಬಾಡಿಗೆ ವಸೂಲಿ ಸೇರಿದಂತೆ ಹಂಚಿಕೆಯನ್ನೂ ಸಹ ಒಕ್ಕೂಟದ ಅಧ್ಯಕ್ಷರೆ ನೋಡಿಕೊಳ್ತಾರೆ ಎಂಬ ಸಬೂಬು ನೀಡಿದ್ದಾರೆ, ಸರ್ಕಾರದ ಆಸ್ತಿಯನ್ನೇ ಅನ್ಯರಿಗೆ ಬಾಡಿಗೆ ನೀಡುವ ಮೂಲಕ ಕೋಟ್ಯಾಂತರ ರೂ ಗೋಲ್ಮಾಲ್ ಆಗಿದೆ ಎಂಬುದು ಮುಖಂಡರ ಆರೋಪವಾಗಿದ್ದು ಈ ಕೂಡಲೇ ಸ್ತ್ರೀ ಶಕ್ತಿ ಮಾರುಕಟ್ಟೆ ಸಂಕೀರ್ಣವನ್ನ ವಾಪಸ್ ಸರ್ಕಾರದ ಸುಪರ್ದಿಗೆ ಪಡೆಯಬೇಕು ಇಲ್ಲವಾದಲ್ಲಿ ನ್ಯಾಯಾಲಯದ ಮೆಟ್ಟಿಲೇರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡುವ ಜೊತೆಗೆ ಇಲಾಖೆ ತನಿಖೆಗೆ ಒತ್ತಾಯಿಸಿದರು.
ಶಿವಕುಮಾರ್ ಪಬ್ಲಿಕ್ ನೆಕ್ಸ್ಟ್ ಗುಂಡ್ಲುಪೇಟೆ
Kshetra Samachara
19/06/2026 03:02 pm