ಬೆಂಗಳೂರು:ಜಿಬಿಎ ವ್ಯಾಪ್ತಿಯಲ್ಲಿ ಕ್ಲಾಸ್ ‘ಇ’ ವರ್ಗಕ್ಕೆ ಸೇರಿದ 32 ಕೆರೆಗಳ ನೀರಿನ ಗುಣಮಟ್ಟವನ್ನು ಸುಧಾರಿಸಲು ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಬಿಎ ವ್ಯಾಪ್ತಿಯ ಕೆ-100 ರಾಜಕಾಲುವೆ, ಕ್ಲಾಸ್ ‘ಇ’ ವರ್ಗಕ್ಕೆ ಸೇರಿರುವ ಕೆರೆಗಳು ಹಾಗೂ ರಸ್ತೆ ಪುನಶ್ಚೇತನಕ್ಕೆ ಸಂಬಂಧಿಸಿದಂತೆ ಇಂದು ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಗರದಲ್ಲಿ ಪಾಲಿಕೆ ಒಡೆತನದ 182 ಕೆರೆಗಳಿದ್ದು, ಅವುಗಳಲ್ಲಿ 32 ಕೆರೆಗಳ ನೀರಿನ ಗುಣಮಟ್ಟವು ಕ್ಲಾಸ್ ‘ಇ’ ವರ್ಗಕ್ಕೆ ಸೇರಿದೆ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಏಪ್ರಿಲ್-2026ರಲ್ಲಿ ನೀಡಿರುವ ವರದಿಯಲ್ಲಿ ಉಲ್ಲೇಖಿಸಿದೆ. ಈ ಸಂಬಂಧ ಆಯಾ ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿರುವ ಕ್ಲಾಸ್ ‘ಇ’ ವರ್ಗದ ಕೆರೆಗಳನ್ನು ಪರಿಶೀಲಿಸಿ ಅಗತ್ಯ ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದರು.
ಜಿಬಿಎ ವ್ಯಾಪ್ತಿಯಲ್ಲಿ ಕೇಂದ್ರ ನಗರ ಪಾಲಿಕೆಯಲ್ಲಿ 1 ಕೆರೆ, ಉತ್ತರ ನಗರ ಪಾಲಿಕೆಯಲ್ಲಿ 8 ಕೆರೆ, ದಕ್ಷಿಣ ನಗರ ಪಾಲಿಕೆಯಲ್ಲಿ 7 ಕೆರೆ, ಪೂರ್ವ ನಗರ ಪಾಲಿಕೆಯಲ್ಲಿ 12 ಕೆರೆ ಹಾಗೂ ಪಶ್ಚಿಮ ನಗರ ಪಾಲಿಕೆಯಲ್ಲಿ 4 ಕೆರೆಗಳು ಸೇರಿದಂತೆ ಒಟ್ಟು 32 ಕೆರೆಗಳು ಕ್ಲಾಸ್ ‘ಇ’ ವರ್ಗದಲ್ಲಿವೆ. ಈ ಸಂಬಂಧ ಪಾಲಿಕೆ ಹಾಗೂ ಜಲಮಂಡಳಿ ಅಧಿಕಾರಿಗಳು ಜಂಟಿಯಾಗಿ ಪರಿಶೀಲನೆ ನಡೆಸಿ, ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿದು ವರದಿ ಸಲ್ಲಿಸಬೇಕು ಎಂದು ನಿರ್ದೇಶನ ನೀಡಿದರು.
ಕೆ-100 ರಾಜಕಾಲುವೆ ಮಾರ್ಗದಲ್ಲಿ 19 ಸ್ಥಳಗಳಲ್ಲಿ ಕೊಳಚೆ ನೀರು ಸೇರುತ್ತಿದ್ದು, ಅದನ್ನು ಸಂಪೂರ್ಣವಾಗಿ ತಡೆಯಬೇಕಿದೆ. ಈ ಸಂಬಂಧ ಜಲಮಂಡಳಿ ಹಾಗೂ ಪಾಲಿಕೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಸಮಸ್ಯೆಯ ಮೂಲವನ್ನು ಗುರುತಿಸಿ ರಾಜಕಾಲುವೆಗೆ ಕೊಳಚೆ ನೀರು ಸೇರುವುದನ್ನು ತಡೆಯಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಮಿಷನ್ ರಸ್ತೆಯಲ್ಲಿ ಕೆಲವು ಮನೆಗಳಿಂದ ನೇರವಾಗಿ ರಾಜಕಾಲುವೆಗೆ ಕೊಳಚೆ ನೀರು ಹರಿಯುತ್ತಿದ್ದು, ಯಾವ ಮನೆಗಳಿಂದ ಕೊಳಚೆ ನೀರು ಬರುತ್ತಿದೆ ಎಂಬುದನ್ನು ಪರಿಶೀಲಿಸಿ, ಸಂಬಂಧಿಸಿದವರಿಗೆ ನೋಟಿಸ್ ನೀಡಿ ಸಮಸ್ಯೆ ಸರಿಪಡಿಸಿಕೊಳ್ಳಲು ಸೂಚಿಸಬೇಕು. ಕೆ-109ರ ಕೆಎಸ್ ಗಾರ್ಡನ್ ಸಮೀಪ ರಾಜಕಾಲುವೆ ಭಾಗದಲ್ಲಿ ಒಳಚರಂಡಿ ಪೈಪ್ ಹಾದು ಹೋಗಿದ್ದು, ಭಾರಿ ಮಳೆಯ ಸಂದರ್ಭದಲ್ಲಿ ಒಳಚರಂಡಿ ನೀರು ಉಕ್ಕಿ ಹರಿದು ಸಮಸ್ಯೆ ಉಂಟಾಗುತ್ತಿದೆ. ಆದ್ದರಿಂದ ಆ ಭಾಗವನ್ನು ಮರು ವಿನ್ಯಾಸಗೊಳಿಸಿ(ರೀ-ಮಾಡೆಲಿಂಗ್) ಸಮಸ್ಯೆ ಪರಿಹರಿಸಬೇಕು ಎಂದು ತಿಳಿಸಿದರು.
ಸಭೆಯಲ್ಲಿ ವಿಶೇಷ ಆಯುಕ್ತರಾದ ಸುಷಮಾ ಗೋಡಬೋಲೆ, ಆಯುಕ್ತರಾದ ರಮೇಶ್ ಡಿ.ಎಸ್., ಪೊಮ್ಮಲ ಸುನೀಲ್ ಕುಮಾರ್, ಜಿ. ಜಗದೀಶ್, ಡಾ. ರಾಜೇಂದ್ರ ಕೆ.ವಿ., ಅಪರ ಆಯುಕ್ತರಾದ ಲೋಖಂಡೆ ಸ್ನೇಹಲ್ ಸುಧಾಕರ್, ಮುಖ್ಯ ಅಭಿಯಂತರರು, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಹಾಗೂ ಜಲಮಂಡಳಿ ಅಧಿಕಾರಿಗಳು ಸೇರಿದಂತೆ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
Kshetra Samachara
19/06/2026 07:29 pm