ಬೈರುತ್: ಇಸ್ರೇಲ್ ಲೆಬನಾನ್ ಮೇಲೆ ತನ್ನ ದಾಳಿಯನ್ನು ಮುಂದುವರೆಸಿದೆ. ಇಸ್ರೇಲ್ ಮತ್ತು ಇರಾನ್ ಬೆಂಬಲಿತ ಹೆಜ್ಬೊಲ್ಲಾ ನಡುವೆ ಕದನ ವಿರಾಮ ಜಾರಿಗೆ ಬಂದ ಕೆಲವೇ ಗಂಟೆಗಳಲ್ಲೇ, ದಕ್ಷಿಣ ಲೆಬನಾನ್‌ನಲ್ಲಿ ಇಸ್ರೇಲ್ ಡ್ರೋನ್ ದಾಳಿ ನಡೆಸಿದ್ದು, ಐವರು ಮೃತಪಟ್ಟಿದ್ದಾರೆ. ಕದನ ವಿರಾಮ ಜಾರಿಗೆ ಬಂದ ಕೆಲವೇ ಗಂಟೆಗಳಲ್ಲೇ ಇಸ್ರೇಲ್ ಈ ಡ್ರೋನ್ ದಾಳಿ ನಡೆಸಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ.
ಹೌದು ಲೆಬನಾನ್‌ನ ಮಾಹಿತಿ ಪ್ರಕಾರ, ಇಸ್ರೇಲಿ ಯುದ್ಧ ವಿಮಾನಗಳು ಮತ್ತು ಡ್ರೋನ್‌ಗಳು ಶನಿವಾರ ಬೆಳಗಿನ ಜಾವದವರೆಗೆ ನಬತಿಯೇಹ್ ಪ್ರದೇಶದ ವಸತಿ ಕಟ್ಟಡಗಳು ಮತ್ತು ಮನೆಗಳ ಮೇಲೆ ಸರಣಿ ದಾಳಿ ನಡೆಸಿವೆ. ಈ ದಾಳಿಯಿಂದ ಅಪಾರ ಹಾನಿ ಸಂಭವಿಸಿದೆ.
ದಕ್ಷಿಣ ಲೆಬನಾನ್‌ನಲ್ಲಿ ಇಸ್ರೇಲ್ ಮತ್ತು ಇರಾನ್ ಬೆಂಬಲಿತ ಲೆಬನಾನ್‌ನ ಹೆಜ್ಬೊಲ್ಲಾ ಉಗ್ರರ ನಡುವೆ ಭೀಕರ ಸಮರ ನಡೆದಿತ್ತು. ಈ ಹಿಂಸಾಚಾರವನ್ನು ಕೊನೆಗಾಣಿಸಲು ಅಮೆರಿಕ ಮತ್ತು ಕತಾರ್‌ನ ಮಧ್ಯಸ್ಥಿಕೆಯಲ್ಲಿ, ಇರಾನ್ ಸಹಕಾರದೊಂದಿಗೆ ಕದನ ವಿರಾಮ ಒಪ್ಪಂದಕ್ಕೆ ಬರಲಾಗಿತ್ತು. ಅಮೆರಿಕ ಅಧಿಕಾರಿಗಳು ಶುಕ್ರವಾರ ಈ ಒಪ್ಪಂದ ಜಾರಿಗೆ ಬಂದಿದೆ ಎಂದು ದೃಢಪಡಿಸಿದ್ದರು.
ಒಂದು ದಿನದ ಹಿಂದೆಯಷ್ಟೇ, ಅಂದರೆ ಶುಕ್ರವಾರ, ಲೆಬನಾನ್‌ನ ನಬತಿಯೇಹ್ ಜಿಲ್ಲೆಯಾದ್ಯಂತ ನಡೆದಿದ್ದ ದಾಳಿಗಳಲ್ಲಿ 16 ಜನರು ಸಾವನ್ನಪ್ಪಿದ್ದರು ಮತ್ತು ಹಲವರು ಗಾಯಗೊಂಡಿದ್ದರು. ಇನ್ನೂ ಕೆಲವರು ಕಟ್ಟಡದ ಅವಶೇಷಗಳಡಿಯಲ್ಲಿ ಸಿಲುಕಿ ಕಾಣೆಯಾಗಿದ್ದರು.
ಅಮೆರಿಕ ಮತ್ತು ಇರಾನ್ ನಡುವಿನ ಶಾಂತಿ ಒಪ್ಪಂದದ ಪ್ರಕಾರ, ಲೆಬನಾನ್ ಸೇರಿದಂತೆ ಎಲ್ಲಾ ಕಡೆ ತಕ್ಷಣವೇ ಮಿಲಿಟರಿ ಕಾರ್ಯಾಚರಣೆಗಳನ್ನು ನಿಲ್ಲಿಸಬೇಕು. ಅಲ್ಲದೆ, ಲೆಬನಾನ್ ದೇಶದ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸಬೇಕು ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಇದೀಗ ಇಸ್ರೇಲ್ ಮತ್ತೆ ಲೆಬನಾನ್ ಮೇಲೆ ಭೀಕರ ದಾಳಿ ನಡೆಸುತ್ತಿರುವುದು, ಈ ಶಾಂತಿ ಒಪ್ಪಂದ ಮುರಿದುಬೀಳುವ ಸಾಧ್ಯತೆಯ ಬಗ್ಗೆ ತೀವ್ರ ಆತಂಕ ಮೂಡಿಸಿದೆ.
PublicNext
20/06/2026 12:48 pm