ಬೆಂಗಳೂರು: ಆನ್‌ಲೈನ್ ಟ್ರೇಡಿಂಗ್ ಹೆಸರಿನಲ್ಲಿ ಕೇರಳ ಮೂಲದ ಯುವಕರನ್ನು ಬೆಂಗಳೂರಿಗೆ ಕರೆಸಿ 20 ಲಕ್ಷಕ್ಕೂ ಅಧಿಕ ಹಣ ದೋಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಿಐಡಿ ಇನ್ಸ್‌ಪೆಕ್ಟರ್ ಮಹೇಶ್ ಕನಕಗಿರಿ ಸೇರಿ ಮೂವರನ್ನು ಮಡಿವಾಳ ಪೊಲೀಸರು ಬಂಧಿಸಿದ್ದಾರೆ. ಕುಪೇಂದ್ರ ರೆಡ್ಡಿ ಮತ್ತು ವಸಂತ್ ಕುಮಾರ್ ಬಂಧಿತ ಇತರ ಆರೋಪಿಗಳು. ಮಡಿವಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಸಿಐಡಿ ಇನ್ಸ್‌ಪೆಕ್ಟರ್ ಒಬ್ಬರು ಪೊಲೀಸ್ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಈ ರಾಬರಿ ಕೃತ್ಯದಲ್ಲಿ ನೇರವಾಗಿ ಭಾಗಿಯಾಗಿರುವುದು ಪ್ರಕರಣದ ಗಂಭೀರತೆಯನ್ನು ಹೆಚ್ಚಿಸಿದೆ.
ಆನ್‌ಲೈನ್ ಟ್ರೇಡಿಂಗ್‌ನಲ್ಲಿ 25 ಲಕ್ಷ ಹೂಡಿಕೆ ಮಾಡಿದರೆ 50 ಲಕ್ಷ ವಾಪಸ್ ಸಿಗುತ್ತದೆ ಎಂದು ಆರೋಪಿಗಳು ಕೇರಳದ ಯುವಕರಿಗೆ ಆಮಿಷ ಒಡ್ಡಿದ್ದರು. ಇದನ್ನು ನಂಬಿದ ಯುವಕರು 25 ಲಕ್ಷ ಹಣದೊಂದಿಗೆ ಬೆಂಗಳೂರಿನ ಮಡಿವಾಳದಲ್ಲಿರುವ ಸಿಲಿಕಾನ್ ವ್ಯಾಲಿ ಹೋಟೆಲ್‌ಗೆ ಬಂದಿದ್ದರು. ಯುವಕರು ಹೋಟೆಲ್‌ಗೆ ಬಂದ ಮಾಹಿತಿ ಕುಪೇಂದ್ರ ರೆಡ್ಡಿಗೆ ತಲುಪಿದ ಕೂಡಲೇ, ಆತ ತನ್ನ ಸಹಚರರೊಂದಿಗೆ ಸಿಐಡಿ ಇನ್ಸ್‌ಪೆಕ್ಟರ್ ಮಹೇಶ್ ಕನಕಗಿರಿ ಅವರ ಪೊಲೀಸ್ ಜೀಪ್‌ನಲ್ಲಿ ಸ್ಥಳಕ್ಕೆ ಬಂದಿದ್ದಾನೆ. ಪೊಲೀಸ್ ಅಧಿಕಾರಿಗಳಂತೆ ನಟಿಸಿದ ಆರೋಪಿಗಳು, ಗುರುತಿನ ಚೀಟಿ ತೋರಿಸಿ ಯುವಕರಿಗೆ ಬೆದರಿಕೆ ಹಾಕಿ, ಹಲ್ಲೆ ನಡೆಸಿ 20 ಲಕ್ಷಕ್ಕೂ ಅಧಿಕ ಹಣವನ್ನು ಕಸಿದುಕೊಂಡು ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ರಾಬರಿ ನಡೆಸಿದ ಬಳಿಕ ಕುಪೇಂದ್ರ ಹಣದೊಂದಿಗೆ ಪೊಲೀಸ್ ಜೀಪ್‌ನಲ್ಲಿ ತಪ್ಪಿಸಿಕೊಂಡರೆ, ಆತನ ಇತರ ಸಹಚರರು ಬೈಕ್‌ನಲ್ಲಿ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಘಟನೆ ನಡೆದ ಬಳಿಕ, ಸಂತ್ರಸ್ತ ಕೇರಳದ ಯುವಕರು ಮಡಿವಾಳ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ತನಿಖೆ ಕೈಗೊಂಡ ಪೊಲೀಸರು, ತಕ್ಷಣವೇ ಕಾರ್ಯಪ್ರವೃತ್ತರಾಗಿ ಮೂವರು ಆರೋಪಿಗಳನ್ನು ಬಂಧಿಸಿ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಆರೋಪಿಗಳ ವಿರುದ್ಧ ಡಕಾಯಿತಿ, ಬೆದರಿಕೆ, ಹಲ್ಲೆ ಮತ್ತು ಒಳಸಂಚು ಆರೋಪಗಳಡಿ ಪ್ರಕರಣ ದಾಖಲಿಸಲಾಗಿದೆ. ಮಡಿವಾಳ ಎಸಿಪಿ ವಾಸುದೇವ್ ನೇತೃತ್ವದಲ್ಲಿ ಈ ಪ್ರಕರಣದ ತನಿಖೆ ನಡೆಯುತ್ತಿದೆ. ಆರೋಪಿಗಳು ಈ ಹಿಂದೆಯೂ ಇದೇ ಮಾದರಿಯ ಕೃತ್ಯಗಳಲ್ಲಿ ಭಾಗಿಯಾಗಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಪೊಲೀಸ್ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಇದೇ ರೀತಿಯ ಕೃತ್ಯಗಳನ್ನು ಎಸಗಿದ್ದಾರೆಯೇ ಎಂಬ ಬಗ್ಗೆಯೂ ಆಳವಾದ ತನಿಖೆ ನಡೆಯುತ್ತಿದೆ. ಸದ್ಯ ಆರೋಪಿಗಳಿಂದ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗುತ್ತಿದ್ದು, ಪ್ರಕರಣದ ಎಲ್ಲ ಆಯಾಮಗಳಲ್ಲಿ ತನಿಖೆ ಮುಂದುವರಿದಿದೆ.
PublicNext
20/06/2026 01:13 pm