ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸೇನೆ ಬೇಕೇ ನೀಟ್ ಪರೀಕ್ಷೆಗೆ? ಕೇಂದ್ರ ಸರ್ಕಾರದ ದಕ್ಷತೆ ಇಷ್ಟೇನಾ? - ಖರ್ಗೆ ತೀಕ್ಷ್ಣ ಪ್ರಶ್ನೆ

ಬೆಂಗಳೂರು : ನೀಟ್ (NEET-UG) ವೈದ್ಯಕೀಯ ಪ್ರವೇಶ ಪರೀಕ್ಷೆಯ ಅಕ್ರಮ ಮತ್ತು ಮರುಪರೀಕ್ಷೆಯ ಗೊಂದಲಗಳ ಕುರಿತು ಕೇಂದ್ರ ಸರ್ಕಾರದ ವಿರುದ್ಧ ಗೃಹ ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಪರೀಕ್ಷೆಯ ಪಾವಿತ್ರ್ಯತೆ ಕಾಪಾಡಲು ಸಶಸ್ತ್ರ ಪಡೆಗಳ ನಿಯೋಜನೆ ಮತ್ತು ಇಂಟರ್ನೆಟ್ ನಿಷೇಧದ ಕೇಂದ್ರದ ಕ್ರಮವನ್ನು ಅವರು ತೀಕ್ಷ್ಣವಾಗಿ ವ್ಯಂಗ್ಯವಾಡಿದ್ದಾರೆ. "ಪರೀಕ್ಷೆ ನಡೆಸಲು ಸಶಸ್ತ್ರ ಪಡೆಗಳ ನಿಯೋಜನೆ! ಕೇಂದ್ರ ಸರ್ಕಾರದ ದಕ್ಷತೆ ಇಷ್ಟೇನಾ?!" ಎಂದು ಪ್ರಶ್ನಿಸುವ ಮೂಲಕ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, "ನೀಟ್ ಪರೀಕ್ಷೆಗೆ ಸಂಬಂಧಿಸಿದಂತೆ ಯಾರು ಏನೇ ಸಹಕಾರ ಕೇಳಿದರೂ ನಮ್ಮ ರಾಜ್ಯ ಸರ್ಕಾರ ಸಂಪೂರ್ಣವಾಗಿ ಸಹಕರಿಸಿದೆ. ಆದರೆ, ಈ ಪರೀಕ್ಷೆಯನ್ನು ಯಶಸ್ವಿಯಾಗಿ ಮತ್ತು ಪಾರದರ್ಶಕವಾಗಿ ನಡೆಸುವ ಪ್ರಾಥಮಿಕ ಜವಾಬ್ದಾರಿ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ಹಾಗೂ ಕೇಂದ್ರ ಸರ್ಕಾರದ ಮೇಲೆಯೇ ಇದೆ ಹೊರತು ರಾಜ್ಯಗಳ ಮೇಲಲ್ಲ," ಎಂದು ಸ್ಪಷ್ಟಪಡಿಸಿದರು.

ಕೇಂದ್ರದ ಭದ್ರತಾ ತಂತ್ರಗಳ ವಿರುದ್ಧ ಕಿಡಿಕಾರಿದ ಪ್ರಿಯಾಂಕ್ ಖರ್ಗೆ, "ನನ್ನ ಇಡೀ ಜೀವನದಲ್ಲಿ ಕೇವಲ ಒಂದು ಪ್ರವೇಶ ಪರೀಕ್ಷೆಯನ್ನು ನಡೆಸಲು ಸಶಸ್ತ್ರ ಪಡೆಗಳನ್ನು (Armed Forces) ಮತ್ತು ವಾಯುಪಡೆಯನ್ನು ಬಳಸಿಕೊಳ್ಳುತ್ತಿರುವುದನ್ನು ಇದೇ ಮೊದಲ ಬಾರಿಗೆ ನೋಡುತ್ತಿದ್ದೇನೆ. ಪ್ರಶ್ನೆ ಪತ್ರಿಕೆಗಳನ್ನು ರಕ್ಷಿಸಲು ಸೇನೆಯನ್ನು ಕರೆಯಿಸಿಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ ಎಂದರೆ, ಇದು ಈ ಕೇಂದ್ರ ಸರ್ಕಾರದ ಆಡಳಿತ ದಕ್ಷತೆಯ ಮಟ್ಟ ಎಂತಹುದ್ದು ಎಂಬುದನ್ನು ಇಡೀ ದೇಶಕ್ಕೆ ಸ್ಪಷ್ಟವಾಗಿ ತೋರಿಸಿಕೊಡುತ್ತದೆ," ಎಂದು ತೀಕ್ಷ್ಣವಾಗಿ ಲೇವಡಿ ಮಾಡಿದರು.

ಪರೀಕ್ಷೆಗೂ ಮುನ್ನ 'ಟೆಲಿಗ್ರಾಮ್' ಆಪ್ ಅನ್ನು ತಾತ್ಕಾಲಿಕವಾಗಿ ನಿಷೇಧಿಸಿರುವ ಕೇಂದ್ರದ ಕ್ರಮದ ವಿರುದ್ಧವೂ ಸಚಿವರು ತೀವ್ರ ಅಸಮಾಧಾನ ಹೊರಹಾಕಿದರು. "ಇದು ಅತ್ಯಂತ ಸೋಮಾರಿತನದ ಮತ್ತು ಅದಕ್ಷತೆಯ ನಿರ್ಧಾರ. ದೇಶದ ಲಕ್ಷಾಂತರ ಬಡ ವಿದ್ಯಾರ್ಥಿಗಳು ನೋಟ್ಸ್ ಹಾಗೂ ಪರೀಕ್ಷಾ ತಯಾರಿಗಾಗಿ ಟೆಲಿಗ್ರಾಮ್ ಬಳಸುತ್ತಾರೆ. ಎನ್‌ಟಿಎ ಮತ್ತು ಮೋದಿ ಸರ್ಕಾರದ ವೈಫಲ್ಯಕ್ಕೆ ವಿದ್ಯಾರ್ಥಿಗಳನ್ನು ಶಿಕ್ಷಿಸುವುದು ಎಷ್ಟು ಸರಿ? ಪೇಪರ್ ಲೀಕ್ ಮಾಫಿಯಾವನ್ನು ಹಿಡಿಯುವ ಬದಲು ತಂತ್ರಜ್ಞಾನವನ್ನು ಬ್ಯಾನ್ ಮಾಡುವುದು ಮೂರ್ಖತನ," ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕದಲ್ಲಿ ಮರುಪರೀಕ್ಷೆ ನಡೆಯುವ ಎಲ್ಲಾ ಕೇಂದ್ರಗಳಿಗೂ ಸೂಕ್ತ ಪೊಲೀಸ್ ಭದ್ರತೆ ಹಾಗೂ ಅಗತ್ಯ ಸೌಕರ್ಯಗಳನ್ನು ಒದಗಿಸಲಾಗಿದೆ. ಪರೀಕ್ಷಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ರಾಜ್ಯದ ಕಡೆಯಿಂದ ಎಲ್ಲಾ ರೀತಿಯ ಸಹಕಾರ ನೀಡಲಾಗಿದ್ದರೂ, ವ್ಯವಸ್ಥೆಯ ಮೂಲ ದೋಷಗಳನ್ನು ಸರಿಪಡಿಸುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಸಚಿವರು ಪುನರುಚ್ಚರಿಸಿದರು.

Edited By : Nirmala Aralikatti
PublicNext

PublicNext

20/06/2026 05:47 pm

Cinque Terre

17.27 K

Cinque Terre

2

ಸಂಬಂಧಿತ ಸುದ್ದಿ