ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಿಡದಿ ಟೌನ್‌ಶಿಪ್ ಯೋಜನೆ: ರೆಡ್ ಜೋನ್ ಘೋಷಿಸಿದ್ದು ಏಕೆ? ಕುಮಾರಸ್ವಾಮಿ ಉತ್ತರಿಸಲಿ! - ಡಿಕೆಶಿ ಗುಡುಗು

ಬೆಂಗಳೂರು: ಬಿಡದಿ ಟೌನ್‌ಶಿಪ್ ಯೋಜನೆಯ ಕುರಿತು ವಿವಾದ ತಾರಕಕ್ಕೇರಿರುವ ಬೆನ್ನಲ್ಲೇ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

"ಬಿಡದಿ ಯೋಜನೆಯ ಪಿತಾಮಹ ಕುಮಾರಸ್ವಾಮಿ ಅವರೇ. ಅವರು ಈ ಪ್ರದೇಶವನ್ನು ರೆಡ್ ಜೋನ್ ಎಂದು ಘೋಷಿಸಿದ್ದು ಏಕೆ? ಭೂಮಿಯನ್ನು ಡಿನೋಟಿಫೈ ಮಾಡದಿರಲು ಕಾರಣವೇನು?" ಎಂದು ಡಿ.ಕೆ. ಶಿವಕುಮಾರ್ ಪ್ರಶ್ನಿಸಿದ್ದಾರೆ. ಬಿಡದಿಯ ರೈತರು ಒಳ್ಳೆಯವರಾಗಿದ್ದು, ಅವರನ್ನು ದಾರಿ ತಪ್ಪಿಸಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಶನಿವಾರ ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, ಬಿಡದಿ ಟೌನ್‌ಶಿಪ್ ವಿಚಾರ ಸಚಿವ ಸಂಪುಟದಲ್ಲಿ ಚರ್ಚೆಗೆ ಬಂದಿದ್ದನ್ನು ದೃಢಪಡಿಸಿದರು. "ಈ ಹಿಂದೆ ಕುಮಾರಸ್ವಾಮಿ ಅವರೇ ರೈತರಿಗೆ ಪರಿಹಾರವಾಗಿ ಅಭಿವೃದ್ಧಿಪಡಿಸಿದ ಭೂಮಿಯಲ್ಲಿ ಶೇ. 40 ರಷ್ಟು ನೀಡುವುದಾಗಿ ಹೇಳಿದ್ದರು. ಆದರೆ ನಮ್ಮ ಸರ್ಕಾರ ಶೇ. 50 ರಷ್ಟು ಭೂಮಿ ನೀಡುವುದಾಗಿ ಘೋಷಿಸಿದೆ. ರೈತರಿಗೆ ಪ್ರತಿ ಎಕರೆಗೆ 2.50 ಕೋಟಿ ರೂ. ಪರಿಹಾರ ನೀಡುವ ಪ್ರಕ್ರಿಯೆ ಶುಕ್ರವಾರದಿಂದಲೇ ಆರಂಭವಾಗಿದೆ" ಎಂದು ಅವರು ಮಾಹಿತಿ ನೀಡಿದರು.

ಬಿಡದಿ ಯೋಜನೆಯ ಮೂಲದ ಬಗ್ಗೆ ಸ್ಪಷ್ಟಪಡಿಸಿದ ಡಿ.ಕೆ. ಶಿವಕುಮಾರ್, "ಈ ಯೋಜನೆಯನ್ನು ಕುಮಾರಸ್ವಾಮಿ ಅವರೇ ನೋಟಿಫಿಕೇಶನ್ ಮಾಡಿದ್ದರು. ನಂತರ ಯಡಿಯೂರಪ್ಪ ಅವರು ಇದನ್ನು ಮುಂದುವರಿಸಿದರು. ನಾವು ಇದನ್ನೇ ಇನ್ನಷ್ಟು ಮುಂದಕ್ಕೆ ತೆಗೆದುಕೊಂಡು ಹೋಗುತ್ತಿದ್ದೇವೆಯೇ ಹೊರತು, ಹೊಸದಾಗಿ ಏನನ್ನೂ ಮಾಡುತ್ತಿಲ್ಲ" ಎಂದು ಹೇಳಿದರು. ಬಿಡದಿ ಕೈಗಾರಿಕಾ ಪ್ರದೇಶಕ್ಕೆ ಭೂಸ್ವಾಧೀನ ಮಾಡಿದವರನ್ನು ಪ್ರಶ್ನಿಸಿದ ಸಿಎಂ, "ಪ್ರಸ್ತುತ ಇರುವ 9 ಸಾವಿರ ಎಕರೆಯಲ್ಲಿ 1 ಸಾವಿರ ಎಕರೆಯನ್ನು ಬಿಜೆಪಿಯ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರೇ ಸ್ವಾಧೀನ ಮಾಡಿಕೊಡಲಿಲ್ಲವೇ?" ಎಂದು ಪ್ರಶ್ನಿಸಿದರು.

ವಿರೋಧ ಪಕ್ಷಗಳು ರಾಜಕೀಯ ಲಾಭಕ್ಕಾಗಿ ವಿರೋಧ ವ್ಯಕ್ತಪಡಿಸುತ್ತಿವೆ ಎಂದು ಡಿ.ಕೆ. ಶಿವಕುಮಾರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. "ಹೊಸ ಕೈಗಾರಿಕೆಗಳು ಬರಬೇಕು ಎಂದು ಹೇಳುವ ವಿರೋಧ ಪಕ್ಷದವರು, ಕೇಂದ್ರ ಬೃಹತ್ ಕೈಗಾರಿಕಾ ಸಚಿವರೇ ಎಲ್ಲಿಂದ ಜಮೀನು ತೆಗೆದುಕೊಡಲಿ ಎಂದು ಹೇಳಿರುವುದನ್ನು ಗಮನಿಸಬೇಕು. ಹೀಗಿರುವಾಗ, ಬಿಡದಿ ಜಮೀನನ್ನು ಡಿನೋಟಿಫಿಕೇಶನ್ ಮಾಡಿ ಜೈಲಿಗೆ ಹೋಗಲು ನಾನು ಸಿದ್ಧನಿಲ್ಲ" ಎಂದು ಸ್ಪಷ್ಟಪಡಿಸಿದರು.

"ಬಿಡದಿ ಪ್ರದೇಶವನ್ನು ಕುಮಾರಸ್ವಾಮಿ ಅವರು ಏಕೆ ರೆಡ್ ಜೋನ್ ಎಂದು ಘೋಷಿಸಿದರು? ನೋಟಿಫಿಕೇಶನ್ ಏಕೆ ಮಾಡಿದರು ಎಂಬುದಕ್ಕೆ ಮೊದಲು ಅವರು ಉತ್ತರಿಸಲಿ" ಎಂದು ಡಿ.ಕೆ. ಶಿವಕುಮಾರ್ ಸವಾಲು ಹಾಕಿದರು. "ಯಡಿಯೂರಪ್ಪ ಅವರು ಏಕೆ ಈ ಯೋಜನೆಯನ್ನು ಮುಂದುವರೆಸಿದರು? ಅವರ ಕಾಲದಲ್ಲೇ ಡಿನೋಟಿಫಿಕೇಶನ್ ಮಾಡಲು ಅವಕಾಶವಿತ್ತಲ್ಲವೇ? ಯಾಕೆ ಮಾಡಲಿಲ್ಲ?" ಎಂದೂ ಅವರು ಪ್ರಶ್ನಿಸಿದರು.

"ವಿರೋಧ ಪಕ್ಷದವರು ರಾಜಕೀಯ ಮಾಡುತ್ತಿದ್ದಾರೆ. ಆದರೆ ನಾನು ಇದಕ್ಕೆ ಬೇಸರ ಮಾಡಿಕೊಳ್ಳುವುದಿಲ್ಲ. ಶೇ 80 ರಷ್ಟು ರೈತರು ಭೂಮಿ ನೀಡಲು ಮುಂದೆ ಬಂದಿದ್ದಾರೆ. ಉಳಿದವರು ಮುಂದೆ ಬರಲಿಲ್ಲ ಎಂದರೆ ನಾನು ಏನು ಮಾಡಲು ಸಾಧ್ಯವಿಲ್ಲ. ನಾವು ಕಾನೂನಿನ ಪ್ರಕಾರವೇ ಮುಂದುವರಿಯುತ್ತೇವೆ" ಎಂದು ಮುಖ್ಯಮಂತ್ರಿಗಳು ಪುನರುಚ್ಚರಿಸಿದರು.

ಕುಮಾರಸ್ವಾಮಿ ಅವರು ನೀಡಿರುವ 'ರಕ್ತಕ್ರಾಂತಿ ಆಗುತ್ತದೆ' ಎನ್ನುವ ಹೇಳಿಕೆಯ ಬಗ್ಗೆ ಕೇಳಿದಾಗ, "ಅವರು ದೊಡ್ಡವರು, ಬೃಹತ್ ಕೈಗಾರಿಕಾ ಸಚಿವರು. ಅವರಿಗೆ ಕೈಗಾರಿಕೆಗಳನ್ನು ತರಬೇಕು ಎನ್ನುವ ಆಸೆಯಿದೆ. ಆದರೆ, ಎಲ್ಲಿಗೆ ಕೈಗಾರಿಕೆಗಳನ್ನು ತರಬೇಕು, ಹೇಗೆ ತರಬೇಕು, ಯಾರ ಜಮೀನಿನಲ್ಲಿ ತರಬೇಕು ಎಂಬುದಕ್ಕೆ ಅವರೇ ಉತ್ತರ ಹೇಳಬೇಕು" ಎಂದು ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದರು.

Edited By : Vijay Kumar
PublicNext

PublicNext

20/06/2026 07:42 pm

Cinque Terre

8.71 K

Cinque Terre

0

ಸಂಬಂಧಿತ ಸುದ್ದಿ