ಬೆಂಗಳೂರು : ನಾಳೆ ವಿಶ್ವದಾದ್ಯಂತ 12ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಸಂಭ್ರಮ. ಈಗಾಗಲೇ ರಾಜ್ಯದ ಮೂಲೆ ಮೂಲೆಯಲ್ಲೂ ನಿತ್ಯ ಯೋಗದ ಜಾಗೃತಿ ಕಾರ್ಯಕ್ರಮಗಳು ಜೋರಾಗಿ ನಡೆಯುತ್ತಿವೆ. ಈ ಬಾರಿ ಯೋಗ ದಿನಾಚರಣೆಗೆ ಅತ್ಯಂತ ಅರ್ಥಪೂರ್ಣವಾದ ಸಂದೇಶವನ್ನು ಇಡಲಾಗಿದೆ. ಅದೇ "ಆರೋಗ್ಯಕರ ವೃದ್ಧಾಪ್ಯಕ್ಕಾಗಿ ಯೋಗ". ಹೌದು, ವಯಸ್ಸಾದರೂ ಯೌವನದ ಉತ್ಸಾಹ ಕಾಯ್ದುಕೊಳ್ಳಲು ಯೋಗ ಎಷ್ಟು ಮುಖ್ಯ ಎಂಬುದೇ ಈ ಬಾರಿಯ ವಿಶೇಷ ಜಾಗೃತಿ.
ಇನ್ನು ರಾಜ್ಯದ ಶಕ್ತಿ ಸೌಧವಾದ ಬೆಂಗಳೂರಿನ ವಿಧಾನಸೌಧ ನಾಳೆ ಮುಂಜಾನೆ ಯೋಗ ನಗರಿಯಾಗಿ ಬದಲಾಗಲಿದೆ. ನಾಳೆ ಬೆಳಗ್ಗೆ ಸರಿಯಾಗಿ 6 ಗಂಟೆಗೆ ವಿಧಾನಸೌಧದ ಮುಂಭಾಗದಲ್ಲಿ ಭವ್ಯ ಯೋಗ ದಿನಾಚರಣೆ ಕಾರ್ಯಕ್ರಮ ಆಯೋಜನೆಯಾಗಿದೆ. ಈ ಮಹತ್ವದ ಯೋಗೋತ್ಸವದಲ್ಲಿ ರಾಜ್ಯದ ಗೌರವಾನ್ವಿತ ರಾಜ್ಯಪಾಲರು, ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು, ಸಚಿವರು, ಶಾಸಕರು ಹಾಗೂ ಚಲನಚಿತ್ರ ರಂಗದ ಗಣ್ಯರು ಭಾಗವಹಿಸಿ ಯೋಗಾಸನ ಮಾಡಲಿದ್ದಾರೆ.
ವಿಧಾನಸೌಧದ ಸುತ್ತಮುತ್ತ ಸರಿಸುಮಾರು 2,000ಕ್ಕೂ ಅಧಿಕ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಒಟ್ಟಾಗಿ ಯೋಗ ಮಾಡುವ ಮೂಲಕ ಆರೋಗ್ಯದ ಸಂದೇಶ ಸಾರಲಿದ್ದಾರೆ. ಕೇವಲ ಬೆಂಗಳೂರು ಅಷ್ಟೇ ಅಲ್ಲದೇ, ಇಡೀ ರಾಜ್ಯದ ಎಲ್ಲಾ ಜಿಲ್ಲೆ ಮತ್ತು ತಾಲ್ಲೂಕು ಕೇಂದ್ರಗಳಲ್ಲೂ ನಾಳೆ ಯೋಗ ದಿನಾಚರಣೆಯನ್ನು ಅತ್ಯಂತ ಸಡಗರದಿಂದ ಆಚರಿಸಲು ಸಕಲ ಸಿದ್ಧತೆಗಳು ನಡೆದಿವೆ.
ಇದೇ ವಿಷಯವಾಗಿ ವಿಧಾನಸಭೆಯ ಸಭಾಧ್ಯಕ್ಷರಾದ ಯು.ಟಿ. ಖಾದರ್ ಅವರು ಮಾತನಾಡಿದ್ದು, ಆರೋಗ್ಯದ ಬಗ್ಗೆ ಮಹತ್ವದ ಸಂದೇಶ ನೀಡಿದ್ದಾರೆ. "ಯೋಗ ಎಂದರೆ ಕೇವಲ ಶಾರೀರಿಕ ವ್ಯಾಯಾಮ ಅಷ್ಟೇ ಅಲ್ಲ, ಅದರ ಜೊತೆಗೆ ನಮ್ಮ ಆಹಾರ ಪದ್ಧತಿ ಕೂಡ ಅಷ್ಟೇ ಮುಖ್ಯವಾಗುತ್ತದೆ. ಪ್ರತಿಯೊಬ್ಬರೂ ಆದಷ್ಟು ತಮ್ಮ ಆರೋಗ್ಯದ ಕಡೆಗೆ ಕಾಳಜಿ ವಹಿಸಬೇಕು" ಎಂದು ಅವರು ಕರೆ ನೀಡಿದ್ದಾರೆ.
PublicNext
20/06/2026 05:39 pm