ಮುಂಬೈ : ಮುಂಬೈನ ಪ್ರತಿಷ್ಠಿತ ಐಐಟಿ ಬಾಂಬೆ ಆವರಣದಲ್ಲಿ ಮಧ್ಯರಾತ್ರಿ ಭೀಕರ ಘಟನೆಯೊಂದು ನಡೆದಿದೆ. ಕ್ಯಾಂಪಸ್‌ನ ಒಳಗಿರುವ ಸಿಬ್ಬಂದಿ ವಸತಿಗೃಹದ ಆವರಣಕ್ಕೆ ನುಗ್ಗಿದ ಚಿರತೆಯೊಂದು, ಅಲ್ಲೇ ಇದ್ದ ಬೀದಿ ನಾಯಿಯೊಂದರ ಮೇಲೆ ಮಿಂಚಿನ ವೇಗದಲ್ಲಿ ದಾಳಿ ಮಾಡಿ ಕೊಂದು ಹಾಕಿದೆ. ಈ ಬೇಟೆಯ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.
ಮಧ್ಯರಾತ್ರಿ ಸುಮಾರು 2:30ರ ಸುಮಾರಿಗೆ ಈ ಘಟನೆ ನಡೆದಿದೆ. ಕತ್ತಲಲ್ಲಿ ಯಾರಿಗೂ ತಿಳಿಯದಂತೆ ಸಿಬ್ಬಂದಿ ವಸತಿಗೃಹದ ಮೆಟ್ಟಿಲುಗಳ ಬಳಿ ಬಂದ ಚಿರತೆ, ಅಲ್ಲೇ ನಿಂತಿದ್ದ ನಾಯಿಯ ಮೇಲೆ ಏಕಾಏಕಿ ಎರಗಿದೆ. ಕೇವಲ 35 ಸೆಕೆಂಡುಗಳ ಅವಧಿಯಲ್ಲಿ ನಾಯಿಯ ಕುತ್ತಿಗೆಯನ್ನು ಕಚ್ಚಿ ಹಿಡಿದ ಚಿರತೆ, ಅದನ್ನು ಎಳೆದೊಯ್ದು ಪಕ್ಕದಲ್ಲೇ ಇದ್ದ ದಟ್ಟವಾದ ಪೊದೆಗಳ ಒಳಗೆ ಮಾಯವಾಗಿದೆ.
ಚಿರತೆ ದಾಳಿಯ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಐಐಟಿ ವಿದ್ಯಾರ್ಥಿಗಳು ಹಾಗೂ ಅಲ್ಲಿನ ನಿವಾಸಿಗಳಲ್ಲಿ ಭೀತಿ ಆವರಿಸಿದೆ. ಆದರೆ, ಈ ಘಟನೆಯಲ್ಲಿ ಯಾವುದೇ ವಿದ್ಯಾರ್ಥಿ ಅಥವಾ ಸಿಬ್ಬಂದಿಗೆ ಯಾವುದೇ ಅಪಾಯ ಸಂಭವಿಸಿಲ್ಲ ಎಂದು ಐಐಟಿ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.
ಐಐಟಿ ಬಾಂಬೆ ಕ್ಯಾಂಪಸ್ ಮುಂಬೈನ ಪ್ರಸಿದ್ಧ 'ಸಂಜಯ್ ಗಾಂಧಿ ರಾಷ್ಟ್ರೀಯ ಉದ್ಯಾನವನ'ದ (Sanjay Gandhi National Park) ಅರಣ್ಯ ಗಡಿಗೆ ಹೊಂದಿಕೊಂಡಿದೆ. ಹೀಗಾಗಿ, ಕ್ಯಾಂಪಸ್‌ಗೆ ಚಿರತೆಗಳು ಬರುವುದು ಹೊಸದೇನಲ್ಲ. ಆಹಾರದ ಹುಡುಕಾಟದಲ್ಲಿ ಚಿರತೆಗಳು ಹೆಚ್ಚಾಗಿ ನಾಯಿಗಳನ್ನು ಬೇಟೆಯಾಡಲು ಇಂತಹ ವಸತಿ ಪ್ರದೇಶಗಳಿಗೆ ಲಗ್ಗೆ ಇಡುತ್ತವೆ ಎಂದು ವನ್ಯಜೀವಿ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಘಟನೆ ನಡೆದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಅರಣ್ಯ ಇಲಾಖೆ ಹಾಗೂ ಐಐಟಿ ಭದ್ರತಾ ಸಿಬ್ಬಂದಿ ಕ್ಯಾಂಪಸ್‌ನಲ್ಲಿ ನಿಘಾವನ್ನು ತೀವ್ರಗೊಳಿಸಿದ್ದಾರೆ. ತಡರಾತ್ರಿ ಮತ್ತು ಮುಂಜಾನೆ ಅವಧಿಯಲ್ಲಿ ಯಾರೂ ಒಂಟಿಯಾಗಿ ಓಡಾಡಬಾರದು, ಸುರಕ್ಷತಾ ನಿಯಮಗಳನ್ನು ಪಾಲಿಸಬೇಕು ಮತ್ತು ವನ್ಯಜೀವಿಗಳು ಎಲ್ಲಾದರೂ ಕಂಡುಬಂದರೆ ತಕ್ಷಣ ಮಾಹಿತಿ ನೀಡಬೇಕು ಎಂದು ಅಲ್ಲಿನ ನಿವಾಸಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
PublicNext
20/06/2026 03:21 pm