ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಡ್ರಮ್ ಒಳಗೆ ತಲೆ ಹಾಕಿದ ಮೂಕಪ್ರಾಣಿ : ಕಂಗಾಲಾದ ಗೋಮಾತೆಯ ರಕ್ಷಣೆ

ಅಹಮದಾಬಾದ್: ಹಸಿವಿನಿಂದ ಆಹಾರ ಅರಸುತ್ತಾ ಹೋಗಿ ಪ್ರಾಣಿಗಳು ಅನಾಹುತಕ್ಕೆ ಸಿಲುಕುವ ಘಟನೆಗಳು ಆಗಾಗ ವರದಿಯಾಗುತ್ತಿರುತ್ತವೆ. ಉತ್ತರಪ್ರದೇಶ ಮತ್ತು ರಾಜಸ್ಥಾನಗಳಂತಹ ರಾಜ್ಯಗಳಲ್ಲಿ ಇಂತಹ ಪ್ರಕರಣಗಳು ನಡೆದ ಬೆನ್ನಲ್ಲೇ, ಇದೀಗ ಉತ್ತರ ಗುಜರಾತ್‌ನಿಂದ ಒಂದು ವಿಲಕ್ಷಣ ಹಾಗೂ ಅಷ್ಟೇ ಸಂಕಟ ತರುವಂತಹ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.

ರಸ್ತೆಯಲ್ಲಿ ಅಲೆದಾಡುತ್ತಿದ್ದ ಬೀದಿ ದನವೊಂದು ಆಹಾರ ಅಥವಾ ನೀರಿಗಾಗಿ ಅಲ್ಲಿಯೇ ಬಿದ್ದಿದ್ದ ಪ್ಲಾಸ್ಟಿಕ್ ಡ್ರಮ್ ಒಂದರ ಒಳಗೆ ತಲೆ ಹಾಕಿದೆ. ಆದರೆ, ಅನಿರೀಕ್ಷಿತವಾಗಿ ತಲೆ ಒಳಗೆ ಹೋದ ಕೂಡಲೇ ಅದು ಡ್ರಮ್‌ನ ಕುತ್ತಿಗೆಯ ಭಾಗದಲ್ಲಿ ಸಿಲುಕಿಕೊಂಡಿದೆ. ತಲೆಯನ್ನು ಹೊರಗೆ ತೆಗೆಯಲು ಸಾಧ್ಯವಾಗದೆ ಆ ಮೂಕಪ್ರಾಣಿ ಅಸಹಾಯಕತೆಯಿಂದ ರಸ್ತೆಯುದ್ದಕ್ಕೂ ಪರದಾಡುತ್ತಿರುವ ದೃಶ್ಯ ಎಂತವರನ್ನೂ ಕರಗಿಸುವಂತಿದೆ.

ಉತ್ತರ ಗುಜರಾತ್‌ನಲ್ಲಿ ನಡೆದಿರುವ ಈ ಘಟನೆಯ ವಿಡಿಯೋದಲ್ಲಿ, ಕಣ್ಣು ಕಾಣದಂತೆ ತಲೆಗೆ ಪೂರ್ತಿಯಾಗಿ ಡ್ರಮ್ ಸಿಲುಕಿಕೊಂಡಿರುವುದರಿಂದ ಆ ದನವು ದಿಕ್ಕು ದೆಸೆಯಿಲ್ಲದೆ ರಸ್ತೆಯಲ್ಲೆಲ್ಲಾ ಓಡಾಡಿದೆ. ತನ್ನ ತಲೆಯನ್ನು ಜೋರಾಗಿ ಕೊಡವಿ ಡ್ರಮ್‌ನಿಂದ ಮುಕ್ತಿ ಪಡೆಯಲು ಅದು ಮಾಡಿದ ಪ್ರಯತ್ನಗಳೆಲ್ಲಾ ವಿಫಲವಾಗಿವೆ.

ದನದ ಈ ಕಷ್ಟವನ್ನು ನೋಡಿದ ಸ್ಥಳೀಯರು ತಕ್ಷಣವೇ ಅದರ ನೆರವಿಗೆ ಧಾವಿಸಿದ್ದಾರೆ. ಆದರೆ ಡ್ರಮ್‌ನಿಂದ ತಲೆಯನ್ನು ಬಿಡಿಸುವುದು ಅಷ್ಟು ಸುಲಭವಾಗಿರಲಿಲ್ಲ. ಒಂದು ವೇಳೆ ಡ್ರಮ್ ಹೊರಗೆ ಬಂದಾಗ, ಗಾಬರಿಯಲ್ಲಿ ಪ್ರಾಣಿ ತಮ್ಮ ಮೇಲೆಯೇ ದಾಳಿ ಮಾಡಬಹುದೇನೋ ಎನ್ನುವ ಸಣ್ಣ ಆತಂಕವೂ ಜನರಲ್ಲಿತ್ತು. ಕೊನೆಗೆ ಸ್ಥಳೀಯ ಯುವಕರು ಅತ್ಯಂತ ಜಾಣ್ಮೆಯಿಂದ, ಪ್ರಾಣಿಗೆ ಯಾವುದೇ ನೋವಾಗದಂತೆ ಡ್ರಮ್‌ನಿಂದ ಗೋಮಾತೆಯನ್ನು ಸುರಕ್ಷಿತವಾಗಿ ಪಾರು ಮಾಡಿದ್ದಾರೆ.

ಪ್ರಸ್ತುತ ಈ ವಿಡಿಯೋ ಇಂಟರ್ನೆಟ್‌ನಲ್ಲಿ ತೀವ್ರ ಸಂಚಲನ ಸೃಷ್ಟಿಸುತ್ತಿದ್ದು, ನೆಟ್ಟಿಗರು ಪ್ರಾಣಿಗಳ ರಕ್ಷಣೆಗೆ ಧಾವಿಸಿದ ಸ್ಥಳೀಯರ ಮಾನವೀಯತೆಯನ್ನು ಶ್ಲಾಘಿಸುತ್ತಿದ್ದಾರೆ. ಜೊತೆಗೆ ಇಂತಹ ಪ್ಲಾಸ್ಟಿಕ್ ಡ್ರಮ್ ಹಾಗೂ ತ್ಯಾಜ್ಯಗಳನ್ನು ರಸ್ತೆ ಬದಿಯಲ್ಲಿ ಎಲ್ಲೆಂದರಲ್ಲಿ ಬಿಸಾಡುವ ಜನರ ಬೇಜವಾಬ್ದಾರಿತನದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Edited By : Nirmala Aralikatti
PublicNext

PublicNext

20/06/2026 01:19 pm

Cinque Terre

26.6 K

Cinque Terre

4

ಸಂಬಂಧಿತ ಸುದ್ದಿ