ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನೀಟ್ ಎಡವಟ್ಟು ಮುಂದುವರಿಕೆ : ನಾಗ್ಪುರ ವಿದ್ಯಾರ್ಥಿಗೆ ಅಬುಧಾಬಿ ಪರೀಕ್ಷಾ ಕೇಂದ್ರ ನಿಗದಿ

ನವದೆಹಲಿ: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ನೀಟ್-ಯುಜಿ ಮರುಪರೀಕ್ಷೆ (Re-NEET) ಪ್ರವೇಶ ಪತ್ರ ವಿತರಣೆಯಲ್ಲಿ ಮತ್ತೊಂದು ದೊಡ್ಡ ಎಡವಟ್ಟು ಮಾಡಿಕೊಂಡಿದೆ. ನಾಗ್ಪುರದ ವಿದ್ಯಾರ್ಥಿಯೊಬ್ಬರಿಗೆ ತಾಂತ್ರಿಕ ದೋಷದಿಂದ ಅಬುಧಾಬಿಯ ಪರೀಕ್ಷಾ ಕೇಂದ್ರವನ್ನು ನಿಗದಿಪಡಿಸಲಾಗಿದೆ. ಈ ಘಟನೆ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಮಹಾರಾಷ್ಟ್ರದ ನಾಗ್ಪುರ ಮೂಲದ ವಿದ್ಯಾರ್ಥಿ ಅಬ್ದುಲ್ಲಾ ಮೊಹಮ್ಮದ್ ತಾಲಿಬ್ ತಮ್ಮ ರೀ-ನೀಟ್ ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿದಾಗ ಅಕ್ಷರಶಃ ದಂಗುಬಡಿದಿದ್ದಾರೆ. ಅವರು ಆಯ್ಕೆ ಮಾಡಿಕೊಂಡಿದ್ದ ನಾಗ್ಪುರ, ವರ್ಧಾ ಅಥವಾ ಭಂಡಾರಾ ಪರೀಕ್ಷಾ ಕೇಂದ್ರಗಳ ಬದಲಿಗೆ, ಯುಎಇಯ ಅಬುಧಾಬಿ ನಗರದ ಶಾಲೆಯೊಂದು ಪರೀಕ್ಷಾ ಕೇಂದ್ರವಾಗಿ ನಮೂದಾಗಿತ್ತು. ಈ ಅನಿರೀಕ್ಷಿತ ಬೆಳವಣಿಗೆಯಿಂದ ಅಬ್ದುಲ್ಲಾ ಮತ್ತು ಅವರ ಕುಟುಂಬ ಆಘಾತಕ್ಕೊಳಗಾಗಿದೆ. ಅಬ್ದುಲ್ಲಾರ ತಂದೆ-ತಾಯಿ, "ಪಾಸ್‌ಪೋರ್ಟ್ ಇಲ್ಲದ ನಮ್ಮ ಮಗ ವಿದೇಶಕ್ಕೆ ಹೋಗಿ ಹೇಗೆ ಪರೀಕ್ಷೆ ಬರೆಯಬೇಕು?" ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಈ ವಿಚಿತ್ರ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಕ್ಷಣಾರ್ಧದಲ್ಲಿ ವೈರಲ್ ಆಗಿದೆ.

ಈ ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ಎಚ್ಚೆತ್ತ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಸ್ಪಂದಿಸಿದೆ. ಇದು ತಾಂತ್ರಿಕ ದೋಷದಿಂದ ಉಂಟಾದ ತಪ್ಪು ಎಂದು ಸಂಸ್ಥೆ ಸ್ಪಷ್ಟಪಡಿಸಿದೆ. ವಿದ್ಯಾರ್ಥಿಯ ದೂರನ್ನು ಪರಿಶೀಲಿಸಲಾಗುತ್ತಿದ್ದು, ಅಗತ್ಯ ಪರಿಶೀಲನೆ ಬಳಿಕ ನಾಗ್ಪುರದಲ್ಲೇ ಪರೀಕ್ಷಾ ಕೇಂದ್ರವನ್ನು ಹಂಚಿಕೆ ಮಾಡಿ ಹೊಸ ಪ್ರವೇಶ ಪತ್ರವನ್ನು ನೀಡಲಾಗುವುದು ಎಂದು ಎನ್‌ಟಿಎ ಭರವಸೆ ನೀಡಿದೆ.

ಇದೇ ಸಂದರ್ಭದಲ್ಲಿ, ಎಲ್ಲಾ ಪರೀಕ್ಷಾರ್ಥಿಗಳು ತಮ್ಮ ಪ್ರವೇಶ ಪತ್ರದಲ್ಲಿರುವ ಹೆಸರು, ವೈಯಕ್ತಿಕ ಮಾಹಿತಿ, ಪರೀಕ್ಷಾ ಕೇಂದ್ರ ಮತ್ತು ಇತರೆ ವಿವರಗಳನ್ನು ಕಡ್ಡಾಯವಾಗಿ ಪರಿಶೀಲಿಸಿಕೊಳ್ಳುವಂತೆ ಎನ್‌ಟಿಎ ಸೂಚಿಸಿದೆ. ಯಾವುದೇ ತಪ್ಪು ಕಂಡುಬಂದಲ್ಲಿ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಸಂಸ್ಥೆ ಸಲಹೆ ನೀಡಿದೆ.

Edited By : Nirmala Aralikatti
PublicNext

PublicNext

20/06/2026 05:41 pm

Cinque Terre

2.71 K

Cinque Terre

2

ಸಂಬಂಧಿತ ಸುದ್ದಿ