ಬೆಳಗಾವಿ: ಸಮಾಜದಲ್ಲಿ ಸಾಮರಸ್ಯ ಮೂಡಿಸಲು ಮತ್ತು ಜಾತಿ ಭೇದ ಭಾವ ತೊಡೆದುಹಾಕುವ ನಿಟ್ಟಿನಲ್ಲಿ ಸರ್ಕಾರ ಅಂತರ್ಜಾತಿ ವಿವಾಹಗಳಿಗೆ ಪ್ರೋತ್ಸಾಹಿಸುತ್ತಿದೆ. ಈ ರೀತಿ ಬೇರೆ ಜಾತಿಯ ವರ-ವಧು ಮದುವೆ ಆದಲ್ಲಿ ಅವರಿಗೆ ಸರ್ಕಾರ ಸಹಾಯಧನ ನೀಡಿ ಆರ್ಥಿಕ ಶಕ್ತಿ ತುಂಬುತ್ತಿದೆ.
ಅಂತರ್ಜಾತಿ ವಿವಾಹ ಎಂದರೆ ವಧು ಮತ್ತು ವರ ಬೇರೆ ಬೇರೆ ಜಾತಿಗೆ ಸೇರಿದವರಾಗಿರಬೇಕು. ಹೀಗೆ ಮದುವೆ ಆಗಿರುವ ಆ ದಂಪತಿಗೆ ಸಹಾಯಧನವನ್ನು 1989ರಿಂದ ಕರ್ನಾಟಕ ರಾಜ್ಯದಲ್ಲಿ ನೀಡಲಾಗುತ್ತಿದೆ.
2018ರಿಂದ ಸಹಾಯಧನವನ್ನು ಪರಿಶಿಷ್ಟ ಜಾತಿ ಯುವತಿ ಬೇರೆ ಜಾತಿ ಹುಡುಗನ ಮದುವೆ ಆದರೆ 3 ಲಕ್ಷ ರೂ., ಪರಿಶಿಷ್ಟ ಜಾತಿ ಹುಡುಗ ಬೇರೆ ಜಾತಿ ಹುಡುಗಿಯನ್ನು ಮದುವೆಯಾದರೆ 2.5 ಲಕ್ಷ ರೂ. ಸಹಾಯಧನವನ್ನು ಸರ್ಕಾರ ಹೆಚ್ಚಿಸಿದ್ದು, ಆ ಪ್ರಕಾರವೇ ಸಹಾಯಧನ ಫಲಾನುಭವಿಗಳ ಕೈ ಸೇರುತ್ತಿದೆ. ಆ ಹಣವು ಫಲಾನುಭವಿಗಳ ಬದುಕಿಗೆ ನೆರವಾಗಿದ್ದು, ಉತ್ತಮ ಜೀವನ ಕಟ್ಟಿಕೊಳ್ಳುತ್ತಿದ್ದಾರೆ.
ಬೈಟ್- ರಾಮನಗೌಡ ಕನ್ನೋಳಿ, ಜಂಟಿ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ, ಬೆಳಗಾವಿ
ಅಂತರ್ಜಾತಿ ವಿವಾಹಗಳು ಬಹುತೇಕ ಕುಟುಂಬದ ವಿರೋಧವಾಗಿ ನಡೆದಿರುತ್ತವೆ. ಹಾಗಾಗಿ, ಆರಂಭದಲ್ಲಿ ಸಂಸಾರ ನಡೆಸಿ ಬದುಕು ಕಟ್ಟಿಕೊಳ್ಳಲು ಎರಡು ಹಂತದಲ್ಲಿ ಸಹಾಯಧನ ವಿತರಿಸಲಾಗುತ್ತಿದೆ. 50% ಫಲಾನುಭವಿಗಳ ಖಾತೆಗೆ ಹಣ ಜಮಾವಾಗುತ್ತೆ. ಬಳಿಕ 50% ಹಣ ಫಲಾನುಭವಿಗಳ ಹೆಸರಿನ ಮೇಲೆ ಎಫ್ ಡಿ ಇಡಲಾಗುತ್ತದೆ. ಈ ಹಣದಿಂದಿ ಫಲಾನುಭವಿಗಳು ಅಂಗಡಿ ಸೇರಿದಂತೆ ಇನ್ನಿತರ ಸ್ವಂತ ಉದ್ಯೋಗ ಆರಂಭಿಸಲು ಆ ಹಣವನ್ನು ಸದ್ಬಳಕೆ ಮಾಡಿಕೊಳ್ಳುತ್ತಿದ್ದಾರೆ.
ವಿವಾಹ ಅರ್ಜಿ ಸಲ್ಲಿಸುವುದು ಹೇಗೆ, ಎಲ್ಲಿ?
ಅಂತರ್ಜಾತಿ ವಿವಾಹ ಆದವರು ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಹೀಗೆ ಬಂದ ಅರ್ಜಿಗಳನ್ನು ಆಯಾ ತಾಲೂಕುವಾರು ಇಲಾಖೆ ಅಧಿಕಾರಿಗಳು ಪರಿಶೀಲಿಸಿ ಅವರ ಮನೆಗೆ ಭೇಟಿ ನೀಡುತ್ತಾರೆ. ಅವರು ಅರ್ಹ ಫಲಾನುಭವಿಗಳು ಎಂಬುದನ್ನು ಖಚಿತಪಡಿಸಿಕೊಂಡು, ನೈಜ ದಾಖಲಾತಿಗಳನ್ನು ಖಾತರಿಪಡಿಸಿಕೊಂಡು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಅರ್ಜಿ ಕಳಿಸಿಕೊಡುತ್ತಾರೆ. ಇಲ್ಲಿ ನಾವು ಕೂಡ ಮತ್ತೊಮ್ಮೆ ಪರಿಶೀಲನೆ ನಡೆಸಿ ಸಹಾಯಧನವನ್ನು ಮಂಜೂರು ಮಾಡಲಾಗುತ್ತೆ. ಅರ್ಜಿ ಸಲ್ಲಿಸಲು ಯಾವುದೇ ಕಾಲಮಿತಿ ನಿಗದಿಪಡಿಸಿಲ್ಲ. ಈ ಹಿಂದೆ ಮದುವೆ ಆದ 18 ತಿಂಗಳೊಳಗೆ ಅರ್ಜಿ ಸಲ್ಲಿಸಬೇಕಿತ್ತು. ಆದರೆ, 2024ರಲ್ಲಿ ಈ ನಿಯಮ ತೆಗೆದುಹಾಕಿದ್ದು, ಮದುವೆ ಆದ ವರ್ಷಗಳ ಬಳಿಕವೂ ಈ ಯೋಜನೆಯ ಲಾಭ ಪಡೆಯಬಹುದಾಗಿದೆ.
ಅರ್ಹತೆಗಳು ಏನೇನು?:
ವಧು ಮತ್ತು ವರ ಇಬ್ಬರದ್ದೂ ಮೊದಲನೇ ಮದುವೆ ಆಗಿರಬೇಕು. ವಧು ಮತ್ತು ವರ ಕರ್ನಾಟಕ ರಾಜ್ಯದವರೇ ಆಗಿರಬೇಕು.
ಸಬ್ ರಜಿಸ್ಟರಡ್ ವಿವಾಹ ಆಗಿರಬೇಕು.
ಸಬ್ ರಜಿಸ್ಟರಡ್ ನೋಂದಾಯಿತ ವಿವಾಹವನ್ನು ಅಭ್ಯರ್ಥಿಗಳ ಆಧಾರ್ ಕಾರ್ಡ್ ಲಿಂಕ್ ಮಾಡಿಸಬೇಕು. ಜಾತಿ ಪ್ರಮಾಣ ಪತ್ರಗಳನ್ನು ಲಗತ್ತಿಸಬೇಕು. ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ಬುಕ್ ಲಗತ್ತಿಸುವುದು ಪ್ರಮುಖ ಮಾನದಂಡಗಳಿವೆ.
ಸಮಾಜ ಕಲ್ಯಾಣ ಇಲಾಖೆಯು ಸಹಾಯಧನಕ್ಕೆ ಅರ್ಜಿ ಆಹ್ವಾನಿಸಿ, ಹಣ ಮಂಜೂರು ಮಾಡಲಾಗುತ್ತಿದೆ. ಪರಿಶಿಷ್ಟ ಜಾತಿಗೆ ಕಳೆದ 2022 ರಿಂದ 2025 ರ ವರೆಗೆ 747 ಜನರು ಅರ್ಜಿ ಹಾಕಿದ್ದಾರೆ. ಯೋಜನೆಗೆ ಅನುದಾನದ ಕೊರತೆ ಇಲ್ಲ. ಎಷ್ಟು ಅರ್ಜಿ ಬರುತ್ತವೋ, ಆ ಎಲ್ಲಾ ಅರ್ಜಿಗಳಿಗೆ ಸಹಾಯಧನ ಮಂಜೂರಾತಿ ಮಾಡಲಾಗುತ್ತಿದೆ.
PublicNext
20/06/2026 06:43 pm