ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉತ್ತರ ಕರ್ನಾಟಕದ ಜನತೆಗೆ ಭರ್ಜರಿ ಸಿಹಿ ಸುದ್ದಿ: ಗೋಲಗುಂಬಜ್ ಎಕ್ಸ್‌ಪ್ರೆಸ್ ಪ್ರಯಾಣದ ಅವಧಿ 55 ನಿಮಿಷ ಕಡಿತ!

​ಬೆಂಗಳೂರು: ವಿಜಯಪುರ, ಬಾಗಲಕೋಟೆ ಸೇರಿದಂತೆ ಉತ್ತರ ಕರ್ನಾಟಕದ ಲಕ್ಷಾಂತರ ರೈಲು ಪ್ರಯಾಣಿಕರ ಬಹುಕಾಲದ ಬೇಡಿಕೆಗೆ ಕೊನೆಗೂ ಮಹತ್ವದ ಮನ್ನಣೆ ಸಿಕ್ಕಿದೆ. ಮೈಸೂರು–ಫಂಡರಾಪುರ ಗೋಲಗುಂಬಜ್ ಎಕ್ಸ್‌ಪ್ರೆಸ್ ರೈಲು ಇನ್ಮುಂದೆ ಹುಬ್ಬಳ್ಳಿ ಮತ್ತು ಗದಗ ಬೈಪಾಸ್ ಮಾರ್ಗದ ಮೂಲಕ ಸಂಚರಿಸಲಿದ್ದು, ಇದರಿಂದ ಪ್ರಯಾಣದ ಅವಧಿ ಬರೋಬ್ಬರಿ 55 ನಿಮಿಷಗಳಷ್ಟು ಉಳಿತಾಯವಾಗಲಿದೆ.

​ಈ ಕುರಿತು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅವರು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದು, "ಇದು ನಮ್ಮ ನಿರಂತರ ಪ್ರಯತ್ನಕ್ಕೆ ಸಿಕ್ಕ ಫಲ" ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

​ಸಚಿವ ಎಂ.ಬಿ.ಪಾಟೀಲ್ ನಿರಂತರ ಪ್ರಯತ್ನ

​ಉತ್ತರ ಕರ್ನಾಟಕ ಭಾಗದ ಜನರ ಅನುಕೂಲಕ್ಕಾಗಿ ಈ ಮಾರ್ಗ ಬದಲಾವಣೆಗೆ ರೈಲ್ವೆ ಮಂಡಳಿ ಒಪ್ಪಿಗೆ ನೀಡಿದೆ. ಇದಕ್ಕಾಗಿ ಸಚಿವ ಎಂ.ಬಿ.ಪಾಟೀಲ್ ಅವರು ನಿರಂತರವಾಗಿ ಪತ್ರ ವ್ಯವಹಾರ, ಮನವಿ ಹಾಗೂ ಕಟ್ಟುನಿಟ್ಟಿನ ಅನುಸರಣಾ ಪ್ರಯತ್ನಗಳನ್ನು ನಡೆಸಿದ್ದರು. ಈ ಪ್ರಯತ್ನಗಳಿಗೆ ರೈಲ್ವೆ ಇಲಾಖೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಹೊಸ ಬೈಪಾಸ್ ಮಾರ್ಗದ ಸಂಚಾರಕ್ಕೆ ಗ್ರೀನ್ ಸಿಗ್ನಲ್ ನೀಡಿದೆ.

​ಕೇಂದ್ರ ಸಚಿವರಿಗೆ ಧನ್ಯವಾದ

​ಈ ಮಹತ್ವದ ನಿರ್ಧಾರಕ್ಕೆ ಸಹಕರಿಸಿದ ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಹಾಗೂ ವಿ. ಸೋಮಣ್ಣ ಅವರಿಗೆ ಸಚಿವ ಎಂ.ಬಿ.ಪಾಟೀಲ್ ಅವರು ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

​"ಜನರ ಸಮಸ್ಯೆಗಳನ್ನು ಗುರುತಿಸಿ, ಅವುಗಳಿಗೆ ಪರಿಹಾರ ಒದಗಿಸುವುದು ನನ್ನ ಮೂಲ ಉದ್ದೇಶ. ಉತ್ತರ ಕರ್ನಾಟಕದ ಅಭಿವೃದ್ಧಿ, ಉತ್ತಮ ಸಂಪರ್ಕ ವ್ಯವಸ್ಥೆ ಹಾಗೂ ಜನಸ್ನೇಹಿ ಸಾರಿಗೆ ಸೌಲಭ್ಯಗಳಿಗಾಗಿ ನನ್ನ ಹೋರಾಟ ಮುಂದೆಯೂ ಇದೇ ಬದ್ಧತೆಯೊಂದಿಗೆ ಸಾಗಲಿದೆ"

ಎಂದು ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.

​ಈ ನಿರ್ಧಾರದಿಂದಾಗಿ ಇನ್ಮುಂದೆ ಪ್ರಯಾಣಿಕರಿಗೆ ಹೆಚ್ಚು ವೇಗದ ಮತ್ತು ಸುಲಭದ ರೈಲು ಸೇವೆ ಸಿಗಲಿದ್ದು, ಸಾರ್ವಜನಿಕ ವಲಯದಲ್ಲಿ ಭಾರಿ ಶ್ಲಾಘನೆ ವ್ಯಕ್ತವಾಗುತ್ತಿದೆ.

Edited By : Vijay Kumar
PublicNext

PublicNext

20/06/2026 10:30 pm

Cinque Terre

4.95 K

Cinque Terre

0

ಸಂಬಂಧಿತ ಸುದ್ದಿ