ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಮುದ್ರದಲ್ಲಿ ತುಫಾನ್ ಏಳದಿದ್ದರೆ ಮಳೆಗಾಲದಲ್ಲಿ ಮೀನು ಸಿಗಲ್ವಾ? - ಈ ‘ನಂಬಿಕೆ’ ಹಿಂದೆ ಅಡಗಿದೆ ವಿಜ್ಞಾನ!

"ಮಳೆಗಾಲದಲ್ಲಿ ಸಮುದ್ರದಲ್ಲಿ ಒಂದ್ಸಲವಾದರೂ ತುಫಾನ್ ಎದ್ದೇಳಬೇಕು... ಇಲ್ಲಾಂದ್ರೆ ಈ ಸೀಸನ್‌ನಲ್ಲಿ ಮೀನು ಸಿಗುವುದು ತುಂಬಾ ಕಷ್ಟ, ಮಾರ್ರೆ!" ಕರಾವಳಿಯ ಮೀನುಗಾರರ ಬಾಯಲ್ಲಿ ಈ ಮಾತು ನೀವು ಹಲವು ಬಾರಿ ಕೇಳಿರಬಹುದು. ಸಮುದ್ರ ಶಾಂತವಾಗಿದ್ದರೆ ಮೀನು ಸಿಗಲ್ಲ, ಅದೇ ಸಮುದ್ರ ರೊಚ್ಚಿಗೆದ್ದು ಮತ್ತೆ ಕೂಲ್ ಆದ್ರೆ ಹೆಚ್ಚು ಮೀನು ಸಿಗುತ್ತೆ ಅನ್ನೋದು ಕರಾವಳಿಯ ಹಿರಿಯ ಮೀನುಗಾರರ ಬಲವಾದ ನಂಬಿಕೆ. ​ಆದರೆ, ಚಂಡಮಾರುತಕ್ಕೂ ಮೀನು ಸಿಗುವುದಕ್ಕೂ ನಿಜವಾಗಿಯೂ ಲಿಂಕ್ ಇದೆಯಾ? ವಿಜ್ಞಾನ ಏನು ಹೇಳುತ್ತೆ? ಕರಾವಳಿಯ ಈ 'ನಂಬಿಕೆ' ಹಿಂದಿರುವ 'ಸತ್ಯತೆ' ಏನು?

'​ಸಮುದ್ರ ಅಡಿಮೇಲು': ಏನಿದು ಪ್ರಕೃತಿ ಮಹಿಮೆ!

​ವಿಜ್ಞಾನದ ಪ್ರಕಾರ, ಸಮುದ್ರ ಮೇಲ್ನೋಟಕ್ಕೆ ಶಾಂತವಾಗಿದ್ದಾಗ ಮೇಲಿನ ನೀರು ಬಿಸಿಯಾಗಿರುತ್ತದೆ ಮತ್ತು ಪೌಷ್ಟಿಕಾಂಶಗಳೆಲ್ಲ ಸಮುದ್ರದ ತಳಭಾಗದಲ್ಲಿ (Bottom) ಕುಳಿತಿರುತ್ತವೆ. ಆದರೆ ಮಳೆಗಾಲದಲ್ಲಿ ಭಾರಿ ಗಾಳಿ ಬೀಸಿ, ತುಫಾನ್ ಮುನ್ಸೂಚನೆ ಇರುವಾಗ ಸಮುದ್ರದಲ್ಲಿ ದೊಡ್ಡ ತಲ್ಲಣ ಸೃಷ್ಟಿಯಾಗುತ್ತದೆ.

​ಇದನ್ನು ವಿಜ್ಞಾನಿಗಳು ‘ಅಪ್‌ವೆಲ್ಲಿಂಗ್’ (Upwelling) ಎನ್ನುತ್ತಾರೆ. ಅಂದರೆ ಸಮುದ್ರದ ತಳದಲ್ಲಿದ್ದ ತಣ್ಣನೆಯ ನೀರು ಮತ್ತು ಅದ್ಭುತ ಪೌಷ್ಟಿಕಾಂಶಗಳು (Nutrients) ಮೇಲಕ್ಕೆ ಚಿಮ್ಮುತ್ತವೆ. ಈ ಪೌಷ್ಟಿಕಾಂಶಗಳನ್ನು ತಿನ್ನಲು ಕೋಟ್ಯಂತರ ಸಣ್ಣ ಪ್ಲಾಂಕ್ಟನ್‌ಗಳು (Planktons) ಮೇಲ್ಮೈಗೆ ಬರುತ್ತವೆ. ಇವುಗಳನ್ನು ಬೇಟೆಯಾಡಲು ಬೂತಾಯಿ (Sardines), ಬಂಗುಡೆ (Mackerel) ಸೇರಿದಂತೆ ಇತರ ಮೀನುಗಳ ಹಿಂಡು ದಡದ ಹತ್ತಿರ ಮತ್ತು ಸಮುದ್ರದ ಮೇಲ್ಭಾಗಕ್ಕೆ ಧಾವಿಸಿ ಬರುತ್ತವೆ. ಸಮುದ್ರ ಕಲಕಿದಾಗ ಮೀನು ಸಿಗಲು ಇದೇ ಪ್ರಮುಖ ಕಾರಣ.

​ತುಫಾನ್ ಎದ್ದಾಗ ದಿಕ್ಕು ತಪ್ಪುವ ಮತ್ಸ್ಯ ಸಂಕುಲ!

​ಭಾರಿ ಗಾಳಿ ಮತ್ತು ಅಲೆಗಳ ಅಬ್ಬರಕ್ಕೆ ಸಮುದ್ರದ ನೀರು ಸಂಪೂರ್ಣವಾಗಿ ಗೊಂದಲಮಯವಾಗುತ್ತದೆ. ಈ ಕ್ಷೋಭೆಯ ಸಮಯದಲ್ಲಿ ಮೀನುಗಳು ತಮ್ಮ ದಿಕ್ಕನ್ನು ಕಳೆದುಕೊಳ್ಳುತ್ತವೆ ಮತ್ತು ಸುರಕ್ಷಿತ ಜಾಗ ಅರಸಿ ದಡದ ಕಡೆಗೆ ಬರುತ್ತವೆ. ತುಫಾನ್ ತಣ್ಣಗಾದ ಸಮಯದಲ್ಲಿ ಮೀನುಗಾರರಿಗೆ ಬಲೆ ತುಂಬಾ ಮೀನು ಸಿಗುವುದು ಇದೇ ಕಾರಣಕ್ಕೆ.

ಆಳದಲ್ಲೇ ಆರಾಮವಿದ್ರೆ... ಓಡಿಸ್ತಾನೆ ಮಳೆರಾಯ

​ತುಫಾನ್ ಬಾರದಿದ್ದರೂ ಮೀನುಗಳು ಸಮುದ್ರದಲ್ಲಿ ಇದ್ದೇ ಇರುತ್ತವೆ! ಆದರೆ, ಸಮುದ್ರ ಸಂಪೂರ್ಣ ಶಾಂತವಾಗಿದ್ದಾಗ ಅವು ಆಳ ಸಮುದ್ರದ ತಳಭಾಗದಲ್ಲಿ ಆರಾಮವಾಗಿರುತ್ತವೆ. ಹಾಗಾಗಿ ಮಳೆಗಾಲದಲ್ಲಿ ನಾಡದೋಣಿಗಳಿಗೆ ಅವು ಸುಲಭವಾಗಿ ಸಿಗುವುದಿಲ್ಲ.

​ಸ್ವಲ್ಪ ಜಾಸ್ತಿ ಮೀನು ಬಂದ್ರೆ 'ದೊಡ್ಡ ಸುದ್ದಿ'

​ಮಳೆಗಾಲದಲ್ಲಿ ಜೂನ್ ಮತ್ತು ಜುಲೈ ತಿಂಗಳಲ್ಲಿ ಯಾಂತ್ರೀಕೃತ ಚಿಕ್ಕ-ದೊಡ್ಡ ಬೋಟ್‌ ಮೀನುಗಾರಿಕೆಯನ್ನು ಸಂಪೂರ್ಣ ನಿಷೇಧಿಸಲಾಗಿರುತ್ತದೆ. ಇದು ಮೀನುಗಳ ಸಂತಾನೋತ್ಪತ್ತಿಯ (Breeding Season) ಟೈಮ್. ಈ ಅವಧಿಯಲ್ಲಿ ಕೇವಲ ನಾಡದೋಣಿಗಳು ಮಾತ್ರ ದಡದಿಂದ ಇಂತಿಷ್ಟೇ ದೂರದಲ್ಲಿ ಮೀನು ಹಿಡಿಯುತ್ತವೆ. ಸಪ್ಲೈ ಕಡಿಮೆಯಿರುವಾಗ, ಸಮುದ್ರದ ಅಬ್ಬರದ ಮಧ್ಯೆ ಸ್ವಲ್ಪ ಜಾಸ್ತಿ ಮೀನು ಮಾರುಕಟ್ಟೆಗೆ ಬಂದರೂ ಅದು 'ದೊಡ್ಡ ಸುದ್ದಿ'ಯಾಗುತ್ತದೆ.

ಮಳೆ ಬಿದ್ದರೆ ಮೀನು ಭರಪೂರ

"ರೈತರು ಉತ್ತಮ ಮಳೆಗಾಗಿ ಹೇಗೆ ಕಾಯುತ್ತಾ ಇರುತ್ತಾರೆಯೋ ಹಾಗೇ ಮೀನುಗಾರರು ಕೂಡ ಮಳೆಯ ನಿರೀಕ್ಷೆಯಲ್ಲಿರುತ್ತಾರೆ. ಏಕೆಂದರೆ ಮಳೆ ಬಿದ್ದರೆ ನದಿ, ಸಮುದ್ರದಲ್ಲಿ ಲವಣಾಂಶ ಹೆಚ್ಚಾಗಿ ಮೀನುಗಳಿಗೆ ಯಥೇಚ್ಛವಾಗಿ ಆಹಾರ ಸಿಗುತ್ತದೆ. ಈ ಸಂದರ್ಭ ತುಫಾನ್ ಬಂದರೆ ಸಮುದ್ರದ ಆ ಏರಿಯಾದಲ್ಲಿ ಮಂಥನವಾದಂತಾಗುತ್ತವೆ. ಆಗ ಮೀನುಗಳು ಸ್ವಾಭಾವಿಕವಾಗಿ ಆಹಾರದ ಆಸೆಯಿಂದ ಆ ತೀರ ಪ್ರದೇಶಗಳತ್ತ ಧಾವಿಸುತ್ತವೆ" ಎಂದು ಬೆಂಗ್ರೆಯ ಮೀನುಗಾರ ಅಲ್ಬರ್ಟ್(ಅಲ್ಬಿ) ಹೇಳುತ್ತಾರೆ.

​​ಹಾಗಾಗಿ, "ತುಫಾನ್ ಆಗದಿದ್ದರೆ ಮೀನು ಸಿಗಲ್ಲ" ಎಂಬ ಮೀನುಗಾರರ ಅನುಭವದ ಮಾತು ಬರೀ ನಂಬಿಕೆಯಲ್ಲ, ಅದರ ಹಿಂದೆ ದೊಡ್ಡ ವಿಜ್ಞಾನವೇ ಅಡಗಿದೆ! ಕಡಲ ಒಡಲಿನ 'ಅಡಿಮೇಲು' ಪ್ರಕ್ರಿಯೆಯೇ ಕರಾವಳಿಯ ಜೀವನಾಡಿಯಾದ ಮೀನುಗಾರಿಕೆಗೆ ಶಕ್ತಿ, ಮೀನುಗಾರರ ತುತ್ತಿನ ಚೀಲ ತುಂಬಿಸುತ್ತದೆ.

-ಮನೋಜ್ ಕೆ.ಬೆಂಗ್ರೆ, ಮಂಗಳೂರು

Edited By : Nagaraj Tulugeri
PublicNext

PublicNext

30/06/2026 11:43 am

Cinque Terre

7.66 K

Cinque Terre

0

ಸಂಬಂಧಿತ ಸುದ್ದಿ