ಬೀದರ್: ಬೀದರ್ ನಗರದ ಬ್ರಿಮ್ಸ್ ಆಸ್ಪತ್ರೆಯಲ್ಲಿ ಯುವಕನೊಬ್ಬ ತಲೆನೋವಿನ ನೆಪದಲ್ಲಿ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕಕ್ಕೆ ಬೈಕ್ ಚಲಾಯಿಸಿಕೊಂಡು ನುಗ್ಗಿರುವ ವಿಲಕ್ಷಣ ಘಟನೆ ನಡೆದಿದೆ.
ತಲೆನೋವಿನಿಂದ ಬಳಲುತ್ತಿದ್ದ ಯುವಕ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆಯುವ ಧಾವಂತದಲ್ಲಿ ಬೈಕನ್ನು ಹೊರಗಡೆ ನಿಲ್ಲಿಸುವ ಬದಲು, ನೇರವಾಗಿ ಎಮರ್ಜೆನ್ಸಿ ವಾರ್ಡ್‌ನ ಒಳಗಡೆಯೇ ಚಲಾಯಿಸಿಕೊಂಡು ಬಂದಿದ್ದಾನೆ. ವಾರ್ಡ್‌ನ ಒಳಗೆ ಬೈಕ್ ಬರುತ್ತಿದ್ದಂತೆ ಅಲ್ಲಿದ್ದ ರೋಗಿಗಳು, ಅವರ ಸಂಬಂಧಿಕರು ಹಾಗೂ ಕರ್ತವ್ಯದಲ್ಲಿದ್ದ ವೈದ್ಯರು ಮತ್ತು ಸಿಬ್ಬಂದಿ ಒಂದು ಕ್ಷಣ ಆತಂಕ ಹಾಗೂ ಆಶ್ಚರ್ಯಕ್ಕೊಳಗಾಗಿದ್ದಾರೆ.
ಯುವಕನ ಈ ಹುಚ್ಚಾಟದ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಆಸ್ಪತ್ರೆಯಲ್ಲಿದ್ದ ಸುರಕ್ಷತಾ ಸಿಬ್ಬಂದಿ ಹಾಗೂ ಪೊಲೀಸರು ತಕ್ಷಣವೇ ಸ್ಥಳಕ್ಕೆ ಧಾವಿಸಿದ್ದಾರೆ. ತೀವ್ರ ತಲೆನೋವಿನಿಂದ ಅತಿಯಾದ ಗೊಂದಲಕ್ಕೊಳಗಾಗಿ ಯುವಕ ಈ ರೀತಿ ಮಾಡಿದ್ದಾನೋ ಅಥವಾ ಉದ್ದೇಶಪೂರ್ವಕವಾಗಿ ಆಸ್ಪತ್ರೆಯೊಳಗೆ ಬೈಕ್ ತಂದಿದ್ದಾನೋ ಎಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ. ಆದರೆ ಆಸ್ಪತ್ರೆಯ ಆವರಣದಲ್ಲಿ ಗೊಂದಲ ಸೃಷ್ಟಿಸಿದ ಕಾರಣಕ್ಕಾಗಿ ಸ್ಥಳದಲ್ಲಿದ್ದ ಪೊಲೀಸರು ಯುವಕನಿಗೆ ಚೆನ್ನಾಗಿ ಥಳಿಸಿ, ಬುದ್ಧಿ ಕಲಿಸಿ ವಾರ್ಡ್‌ನಿಂದ ಹೊರಗೆ ಕಳುಹಿಸಿದ್ದಾರೆ. ಬೀದರ್‌ನ ನ್ಯೂ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ವಿಚಿತ್ರ ಘಟನೆ ನಡೆದಿದ್ದು, ಸದ್ಯ ಈ ವಿಷಯ ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
PublicNext
25/07/2026 07:49 pm
LOADING...