ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಿಲಿಂಡರ್ ಕಳ್ಳತನ, ನಾಲ್ವರ ಬಂಧನ

ಬೀದರ್: ಬೀದರ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ಅಡುಗೆ ಅನಿಲ ಸಿಲಿಂಡರ್ ಕಳವು ಪ್ರಕರಣಗಳನ್ನು ಭೇದಿಸುವಲ್ಲಿ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ. ನಾಲ್ವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ₹9.75 ಲಕ್ಷ ಮೌಲ್ಯದ 55 ಅಡುಗೆ ಅನಿಲ ಸಿಲಿಂಡರ್‌ಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಕಾರನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಬೀದರ್ ಎಸ್‌ಪಿ ಪ್ರದೀಪ್ ಗುಂಟಿ ತಿಳಿಸಿದ್ದಾರೆ.

ಆಗಸ್ಟ್ 2ರಂದು ಕಳವು ಮಾಡಿದ ಸಿಲಿಂಡರ್‌ಗಳನ್ನು ಮಹಾರಾಷ್ಟ್ರದ ಉದಗೀರ ಕಡೆಗೆ ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ, ಭಾಲ್ಕಿ ಡಿವೈಎಸ್‌ಪಿ ಬಲಪ್ಪ ನಂದಗಾವೆ ಅವರ ಮಾರ್ಗದರ್ಶನದಲ್ಲಿ ಸಿಪಿಐ ಹಣಮರೆಡ್ಡಪ್ಪ ನೇತೃತ್ವದ ವಿಶೇಷ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದೆ.

ಇನ್ನು ವಿಚಾರಣೆ ವೇಳೆ ಆರೋಪಿಗಳು ಭಾಲ್ಕಿ ತಾಲೂಕಿನ 27 ಗ್ರಾಮಗಳು, ಹುಮನಾಬಾದ್ ತಾಲೂಕಿನ 8 ಗ್ರಾಮಗಳು ಹಾಗೂ ಬಸವಕಲ್ಯಾಣ ತಾಲೂಕಿನ ಒಂದು ಗ್ರಾಮದಲ್ಲಿರುವ ವಿವಿಧ ಶಾಲೆಗಳ ಅಡುಗೆ ಕೊಠಡಿಗಳ ಬೀಗ ಮುರಿದು ಸಿಲಿಂಡರ್‌ಗಳನ್ನು ಕಳವು ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಕಳವು ಮಾಡಿದ ಸಿಲಿಂಡರ್‌ಗಳನ್ನು ಭಾಲ್ಕಿ ತಾಲೂಕಿನ ದಾಡಗಿ ಕ್ರಾಸ್ ಸಮೀಪದ ಚಹಾ ಹೋಟೆಲ್‌ನಲ್ಲಿ ಅಡಗಿಸಿಟ್ಟಿರುವ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ 55 ಸಿಲಿಂಡರ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಎಸ್‌ಪಿ ತಿಳಿಸಿದ್ದಾರೆ.

Edited By :
PublicNext

PublicNext

05/08/2026 01:11 pm

Cinque Terre

5.44 K

Cinque Terre

0