ಬೈಲಹೊಂಗಲ: ನಗರದ ಹರಳಯ್ಯ ಕಾಲೋನಿಯ ಎಸ್.ಸಿ. ಹಾಗೂ ಮುಸ್ಲಿಂ ಸಮುದಾಯದ ನಿವಾಸಿಗಳ ತಮ್ಮ ಮನೆಗಳ ಮಾಲೀಕತ್ವ ಉತಾರವನ್ನು ತಕ್ಷಣ ಪೂರೈಸುವಂತೆ ಒತ್ತಾಯಿಸಿ ನಗರಸಭೆ ಪೌರಾಯುಕ್ತರಿಗೆ ಜೈ ಭೀಮ ಜನಜಾಗೃತಿ ಸೇವಾ ಸಂಘದ ಜಿಲ್ಲಾ ಉಪಾಧ್ಯಕ್ಷ ಪರಶುರಾಮ ರಾಯಬಾಗ ನೇತೃತ್ವದಲ್ಲಿ ನಿವಾಸಿಗಳು ಸೋಮವಾರ ಮನವಿ ಸಲ್ಲಿಸಿದರು.
ಮನವಿಯಲ್ಲಿ, ಮನೆಗಳ ಹಕ್ಕುಪತ್ರಗಳನ್ನು ಪಡೆಯಲು ಕಾಲೋನಿಯ ನಿವಾಸಿಗಳು ಉಪವಿಭಾಗಾಧಿಕಾರಿಗಳ ಕಚೇರಿ ಎದುರು 62 ದಿನಗಳ ಕಾಲ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಿದ ಬಳಿಕ 2025ರ ಡಿಸೆಂಬರ್ 13ರಂದು ಹಕ್ಕುಪತ್ರಗಳನ್ನು ಪಡೆದಿದ್ದಾರೆ. ಆದರೆ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಹಾಗೂ ನಗರಸಭೆಯಿಂದ ಹಕ್ಕುಪತ್ರ ವಿತರಣೆಗೊಂಡು ಆರು ತಿಂಗಳು ಕಳೆದರೂ ನಿವಾಸಿಗಳ ಹೆಸರಿಗೆ ಮಾಲೀಕತ್ವ ಉತಾರ ಮಾಡಿಕೊಡಲಾಗಿಲ್ಲ ಎಂದು ದೂರಿದ್ದಾರೆ.
ಮಾಲೀಕತ್ವ ಉತಾರ ಇಲ್ಲದ ಕಾರಣ ಸರ್ಕಾರದ ವಿವಿಧ ವಸತಿ ಯೋಜನೆಗಳಡಿ ದೊರೆಯುವ ಮನೆ ನಿರ್ಮಾಣ ಸಹಾಯಧನದಿಂದ ವಂಚಿತರಾಗಿದ್ದೇವೆ. ಕಳೆದ ವರ್ಷ ಸುರಿದ ಭಾರೀ ಮಳೆಯಿಂದ ರಮೇಜ್ ಫಕ್ರುಸಾಬ್ ದಫೇದಾರ ಹಾಗೂ ಚಂದ್ರಿಕಾ ನಾರಾಯಣ ಕಳಂಕರ್ ಅವರ ಮನೆಗಳು ಕುಸಿದಿದ್ದು, ಹೊಸ ಮನೆ ನಿರ್ಮಿಸಿಕೊಳ್ಳಲು ಅಗತ್ಯ ನೆರವು ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದಾರೆ.
ಕಾಲೋನಿಯ ಬಹುತೇಕ ನಿವಾಸಿಗಳು ಬಡವರಾಗಿದ್ದು, ಸ್ವಂತ ಹಣದಿಂದ ಮನೆ ಕಟ್ಟಿಕೊಳ್ಳುವ ಆರ್ಥಿಕ ಸಾಮರ್ಥ್ಯ ಹೊಂದಿಲ್ಲ. ದಿನಗೂಲಿ, ಸಣ್ಣ ವ್ಯಾಪಾರ ಹಾಗೂ ಮನೆ ಕೆಲಸಗಳನ್ನು ಮಾಡಿಕೊಂಡು ಜೀವನ ಸಾಗಿಸುತ್ತಿದ್ದು, ಪ್ರತಿವರ್ಷ ಮಳೆಯಿಂದ ಮನೆಗಳು ಜಲಾವೃತಗೊಂಡು ಕುಸಿಯುವ ಆತಂಕ ಎದುರಿಸುತ್ತಿದ್ದೇವೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಆದ್ದರಿಂದ ನಗರಸಭೆ ಪೌರಾಯುಕ್ತರು ಕೂಡಲೇ ಕ್ರಮ ಕೈಗೊಂಡು ಹರಳಯ್ಯ ಕಾಲೋನಿಯ ಎಲ್ಲ ನಿವಾಸಿಗಳ ಮನೆಗಳ ಮಾಲೀಕತ್ವ ಉತಾರವನ್ನು ಅವರ ಹೆಸರಿಗೆ ಪೂರೈಸಿ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಲಾಗಿದೆ.
ಭರಮಪ್ಪ ತೊರಗಲ, ಶ್ರೀಕಾಂತ ದೊಡಮನಿ, ರಿಯಾಜ ಅನ್ಸಾರಿ, ಪರಶುರಾಮ ಬನ್ನಿಗಿಡದ, ಶಿವಾನಂದ ದಳವಾಯಿ, ಉಮೇಶ ದೊಡಮನಿ, ಮಹಬೂಬಿ ಸೈಯದ, ಮುಸ್ಕಾನ ಸೈಯದ, ಬೀಬಿಜಾನ ಸೈಯದ, ಇಮಾಂಬು ಸಂಗೊಳ್ಳಿ, ರಮೇಜಾ ಹಕ್ಕಿ, ಜಾಸ್ಮೀನ ಫನಿಬಂದ, ಖುರಶೀದಬಾನು ಸೈಯದ, ರೇಶ್ಮಾ ಮುಗುಟಖಾನ, ಈರವ್ವ ದಳವಾಯಿ, ಸಿದ್ದವ್ವ ಭಜಂತ್ರಿ, ಕಾಶವ್ವ ರಾಯಬಾಗ ಹಾಗೂ ಕಾಲೋನಿ ನಿವಾಸಿಗಳು ಇದ್ದರು.
Kshetra Samachara
27/07/2026 08:00 pm