ಭಟ್ಕಳ: ತಾಲೂಕಿನ ಜಾಲಿಕೋಡಿ ಸಮೀಪ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಭಾರಿ ಅಲೆಯ ಹೊಡೆತಕ್ಕೆ ಫಾತಿ ದೋಣಿ ಮುಳುಗಿ ನಾಪತ್ತೆಯಾಗಿದ್ದ ಮೀನುಗಾರ ಮಂಜುನಾಥ ಬೇಟಿ ಮೋಗೇರ (57) ಅವರ ಶವ ಬುಧವಾರ ಬೆಳಗ್ಗೆ ಮುಂಡಳ್ಳಿ ಸಮೀಪದ ಸಮುದ್ರ ತೀರದಲ್ಲಿ ಪತ್ತೆಯಾಗಿದೆ.
ಜಾಲಿಕೋಡಿ ನಿವಾಸಿಯಾದ ಮಂಜುನಾಥ ಅವರು ಮಂಗಳವಾರ ಮಧ್ಯಾಹ್ನ ಸುಮಾರು 1.30ರ ವೇಳೆಗೆ ಫಾತಿ ದೋಣಿಯಲ್ಲಿ ಒಬ್ಬರೇ ಮೀನುಗಾರಿಕೆಗೆ ತೆರಳಿದ್ದರು. ಈ ವೇಳೆ ಏಕಾಏಕಿ ಎದ್ದ ಭಾರಿ ಅಲೆಯ ಹೊಡೆತಕ್ಕೆ ದೋಣಿ ಪಲ್ಟಿಯಾಗಿ ಮುಳುಗಿದ್ದು, ಅವರು ಸಮುದ್ರದ ಆಳಕ್ಕೆ ಕೊಚ್ಚಿಹೋಗಿ ನಾಪತ್ತೆಯಾಗಿದ್ದರು.
ಘಟನೆಯ ಬಳಿಕ ಸ್ಥಳೀಯ ಮೀನುಗಾರರು ದೋಣಿಗಳ ಮೂಲಕ ತೀವ್ರ ಶೋಧ ಕಾರ್ಯ ನಡೆಸಿದರೂ, ಸಮುದ್ರ ಪ್ರಕ್ಷುಬ್ಧವಾಗಿದ್ದರಿಂದ ಮತ್ತು ಅಲೆಗಳ ಅಬ್ಬರ ಹೆಚ್ಚಿದ್ದ ಕಾರಣ ಕಾರ್ಯಾಚರಣೆಗೆ ಅಡಚಣೆ ಉಂಟಾಗಿತ್ತು.
ಬುಧವಾರ ಬೆಳಗ್ಗೆ ಮುಂಡಳ್ಳಿ ಗ್ರಾಮದ ಮೋಗೇರಕೇರಿ ಸಮೀಪದ ಸಮುದ್ರ ತೀರದಲ್ಲಿ ಮಂಜುನಾಥ ಅವರ ಶವ ತೇಲಿಬಂದಿದ್ದು, ಸ್ಥಳೀಯ ಮೀನುಗಾರರು ಶವವನ್ನು ದಡಕ್ಕೆ ತಂದಿದ್ದಾರೆ.
ಮೃತರ ಪುತ್ರ ಓಂಪ್ರಕಾಶ ಮೋಗೇರ (32) ನೀಡಿದ ದೂರಿನ ಮೇರೆಗೆ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
PublicNext
29/07/2026 05:07 pm
LOADING...