ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭಟ್ಕಳದ ಐತಿಹಾಸಿಕ ಮಾರಿ ಜಾತ್ರೆಗೆ ವಿಧ್ಯುಕ್ತ ಚಾಲನೆ : ಸಾವಿರಾರು ಭಕ್ತರಿಂದ ಮಾರಿ ದೇವಿಯ ದರ್ಶನ!

ಭಟ್ಕಳ: ತಾಲೂಕಿನ ಪ್ರಸಿದ್ಧ ಹಾಗೂ ಐತಿಹಾಸಿಕ ಮಾರಿ ಜಾತ್ರಾ ಮಹೋತ್ಸವಕ್ಕೆ ಬುಧವಾರ ಮುಂಜಾನೆ 5.30 ಗಂಟೆಗೆ ಮಾರಿಕಾಂಬಾ ದೇವಸ್ಥಾನದಲ್ಲಿ ಮಾರಿ ದೇವಿಯನ್ನು ಗದ್ದುಗೆ ಏರಿಸುವ ಮೂಲಕ ವಿಧ್ಯುಕ್ತ ಚಾಲನೆ ದೊರೆಯಿತು. ಬೆಳಗಿನಿಂದಲೇ ಸಾವಿರಾರು ಭಕ್ತರು ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.

ಮಂಗಳವಾರ ರಾತ್ರಿ ಮಾರಿ ದೇವಿಯ ಮೂರ್ತಿಯನ್ನು ತಯಾರಿಸಿದ ವಿಶ್ವಕರ್ಮ ಸಮಾಜದವರು ವಿಶೇಷ ಪೂಜೆ ನೆರವೇರಿಸಿದರು. ಬಳಿಕ ಮುಂಜಾನೆ ಮೂರ್ತಿಯನ್ನು ಸಾಂಪ್ರದಾಯಿಕ ಮೆರವಣಿಗೆಯ ಮೂಲಕ ದೇವಸ್ಥಾನಕ್ಕೆ ಕರೆತರಲಾಯಿತು. ಸಂಪ್ರದಾಯದಂತೆ ಜೈನ ಸಮುದಾಯದವರು ಮಾರಿ ದೇವಿಗೆ ಮೊದಲ ಪೂಜೆ ಸಲ್ಲಿಸಿದರು. ನಂತರ ಮಾರಿಕಾಂಬಾ ದೇವಾಲಯದ ಎದುರಿನ ಪ್ರಾಂಗಣದಲ್ಲಿ ಗರ್ಭಗುಡಿಯ ಹೊರಭಾಗದಲ್ಲಿ ಮಾರಿ ದೇವಿಯನ್ನು ಪ್ರತಿಷ್ಠಾಪಿಸಲಾಯಿತು.

ಉತ್ತರ ಕನ್ನಡ ಜಿಲ್ಲೆಯ ಪ್ರಮುಖ ಜಾತ್ರೆಗಳಲ್ಲಿ ಭಟ್ಕಳದ ಮಾರಿ ಜಾತ್ರೆಯೂ ಒಂದಾಗಿದೆ. ಸುಮಾರು 25 ವರ್ಷಗಳ ಹಿಂದೆ ಈ ಜಾತ್ರೆಯು ಸಂಪೂರ್ಣವಾಗಿ ಗ್ರಾಮದೇವತೆಯ ಉತ್ಸವವಾಗಿ, ಹಿಂದುಳಿದ ವರ್ಗ ಹಾಗೂ ಪರಿಶಿಷ್ಟ ಜಾತಿ-ಪಂಗಡದ ಸಮುದಾಯಗಳ ಮುಂದಾಳತ್ವದಲ್ಲಿ ವಿಶಿಷ್ಟವಾಗಿ ಆಚರಿಸಲ್ಪಡುತ್ತಿತ್ತು. ಕಾಲಕ್ರಮೇಣ ಜಾತ್ರೆಯ ವ್ಯಾಪ್ತಿ ವಿಸ್ತರಿಸಿಕೊಂಡು ಇಂದು ಸಾವಿರಾರು ಭಕ್ತರನ್ನು ಸೆಳೆಯುವ ಬೃಹತ್ ಧಾರ್ಮಿಕ ಉತ್ಸವವಾಗಿ ಬೆಳೆದಿದೆ.

ಎರಡು ದಿನಗಳ ಕಾಲ ನಡೆಯುವ ಜಾತ್ರೆಯಲ್ಲಿ ಮೊದಲ ದಿನ ಪರಊರಿನವರು ತಮ್ಮ ಮನೆಗಳಲ್ಲಿ ಹಬ್ಬ ಆಚರಿಸಿದರೆ, ಎರಡನೇ ದಿನವಾದ ಗುರುವಾರ ಸ್ಥಳೀಯರು ಸಂಭ್ರಮದಿಂದ ಹಬ್ಬವನ್ನು ಆಚರಿಸಲಿದ್ದಾರೆ. ಈ ಹಬ್ಬದ ಅಂಗವಾಗಿ ಕೆಲವರು ತಮ್ಮ ಮನೆಗಳಲ್ಲೇ ಕೋಳಿಯನ್ನು ಬಲಿ ನೀಡಿ ದೇವಿಗೆ ರಕ್ತ ಸಮರ್ಪಿಸುವ ಸಂಪ್ರದಾಯವೂ ಇಂದಿಗೂ ಮುಂದುವರಿದಿದೆ. ಜಾತ್ರೆಯಲ್ಲಿ ಭಾಗವಹಿಸಲು ಅಕ್ಕಪಕ್ಕದ ತಾಲೂಕುಗಳು ಸೇರಿದಂತೆ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಆಗಮಿಸಿ ದೇವಿಯ ಆಶೀರ್ವಾದ ಪಡೆಯುತ್ತಿದ್ದಾರೆ.

ಮಾರಿ ರೂಪದಲ್ಲಿ ಪೂಜಿಸಲ್ಪಡುವ ದೇವಿಗೆ ಊರಿನಲ್ಲಿ ಕಣ್ಣುಬೇನೆ, ಸಿಡುಬು ಸೇರಿದಂತೆ ಯಾವುದೇ ಸಾಂಕ್ರಾಮಿಕ ರೋಗಗಳು ಹರಡದಂತೆ ಕಾಪಾಡುವಂತೆ ಭಕ್ತರು ಪ್ರಾರ್ಥಿಸುತ್ತಾರೆ. ಹರಕೆಯಾಗಿ ಹೂವಿನ ಟೋಪಿ, ಎಲೆಗಳಿಂದ ತಯಾರಿಸಿದ ಹೂಕಟ್ಟೆ ಹಾಗೂ ಬೆಳ್ಳಿಯ ಕಣ್ಣುಗಳನ್ನು ಅರ್ಪಿಸುವುದು ಈ ಜಾತ್ರೆಯ ಪ್ರಮುಖ ವಿಶೇಷತೆಯಾಗಿದೆ. ತಮ್ಮ ಕಷ್ಟ-ಕಾರ್ಪಣ್ಯಗಳು ದೂರವಾಗಿ ಮನೋಕಾಮನೆಗಳು ಈಡೇರಲಿ ಎಂಬ ನಂಬಿಕೆಯಿಂದ ಪ್ರತಿವರ್ಷವೂ ಭಕ್ತರು ಹರಕೆ ತೀರಿಸುವ ಸಂಪ್ರದಾಯವನ್ನು ಪಾಲಿಸುತ್ತಿದ್ದಾರೆ.

ಜಾತ್ರೆಯ ಸಮಾರೋಪವು ಗುರುವಾರ ಸಂಜೆ 4.30ಕ್ಕೆ ನಡೆಯಲಿದ್ದು, ಮಾರಿ ದೇವಿಯ ಮೂರ್ತಿಯನ್ನು ತಲೆಯ ಮೇಲೆ ಹೊತ್ತು ಮೆರವಣಿಗೆಯ ಮೂಲಕ ಕರಿಕಲ್ ಸಮುದ್ರಕ್ಕೆ ಕೊಂಡೊಯ್ದು ವಿಸರ್ಜನೆ ಮಾಡುವ ಮೂಲಕ ಜಾತ್ರಾ ಮಹೋತ್ಸವಕ್ಕೆ ತೆರೆ ಬೀಳಲಿದೆ.

ಜಾತ್ರೆಯ ಹಿನ್ನೆಲೆಯಲ್ಲಿ ಎರಡು ದಿನಗಳ ಕಾಲ ಪೊಲೀಸ್ ಇಲಾಖೆಯು ಬಿಗಿ ಭದ್ರತಾ ವ್ಯವಸ್ಥೆ ಕಲ್ಪಿಸಿದೆ. ಮಾರಿ ದೇವಿಯ ಮೂರ್ತಿಯನ್ನು ಪ್ರತಿಷ್ಠಾಪಿಸುವ ಮೊದಲು ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನದಳದಿಂದ ದೇವಸ್ಥಾನದ ಆವರಣವನ್ನು ಸಂಪೂರ್ಣವಾಗಿ ತಪಾಸಣೆ ನಡೆಸಲಾಯಿತು. ಜೊತೆಗೆ ದೇವರ ದರ್ಶನಕ್ಕೆ ಆಗಮಿಸುವ ಭಕ್ತರನ್ನೂ ಕಟ್ಟುನಿಟ್ಟಿನ ಪರಿಶೀಲನೆಯ ನಂತರವೇ ದೇವಸ್ಥಾನದೊಳಗೆ ಪ್ರವೇಶಿಸಲು ಅವಕಾಶ ಕಲ್ಪಿಸಲಾಗಿದೆ.

Edited By :
PublicNext

PublicNext

05/08/2026 10:26 pm

Cinque Terre

2.03 K

Cinque Terre

0

ಸಂಬಂಧಿತ ಸುದ್ದಿ