ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭಟ್ಕಳ : ಯೋಗಗುರು ಗೋವಿಂದ ಎನ್. ದೇವಾಡಿಗ ಅವರಿಗೆ ‘ಭಾರತೀಯ ಯೋಗ ರತ್ನ–2026’ ಪ್ರಶಸ್ತಿ ಪ್ರದಾನ

ಭಟ್ಕಳ : ಯೋಗದ ಮೂಲಕ ಸಮಾಜದಲ್ಲಿ ಆರೋಗ್ಯಕರ ಬದುಕಿನ ಅರಿವು ಮೂಡಿಸಿ, ನಿರಂತರ ಸೇವಾಭಾವದಿಂದ ಎರಡು ದಶಕಗಳಿಗೂ ಅಧಿಕ ಕಾಲ ಕಾರ್ಯನಿರ್ವಹಿಸಿರುವ ಭಟ್ಕಳ ತಾಲೂಕಿನ ಹೆಬಳೆ ನಿವಾಸಿ, ಯೋಗಗುರು ಗೋವಿಂದ ಎನ್. ದೇವಾಡಿಗ ಅವರಿಗೆ ‘ಭಾರತೀಯ ಯೋಗ ರತ್ನ–2026’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಭಾರತ ಸರ್ಕಾರದಲ್ಲಿ ನೋಂದಾಯಿತ ಹಾಗೂ ನೀತಿ ಆಯೋಗದ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ 'ದಿ ಇಂಡಿಯನ್ ಫೋರಮ್ ಆಫ್ ಸೋಷಿಯಲ್ ಲೀಡರ್ಸ್ ಆ್ಯಂಡ್ ಅಚೀವರ್ಸ್' ಸಂಸ್ಥೆಯು ಮಂಗಳೂರಿನಲ್ಲಿ ಆಯೋಜಿಸಿದ್ದ ವಿಶೇಷ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಿತು.

ಯೋಗದ ಮೂಲಕ ಆರೋಗ್ಯ, ಮಾನಸಿಕ ನೆಮ್ಮದಿ ಹಾಗೂ ಉತ್ತಮ ಜೀವನಶೈಲಿಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಸಲ್ಲಿಸಿದ ಅಮೂಲ್ಯ ಸೇವೆ, ಸಮಾಜಮುಖಿ ಕಾರ್ಯನಿರ್ವಹಣೆ, ಯೋಗಾಭ್ಯಾಸವನ್ನು ಗ್ರಾಮೀಣ ಪ್ರದೇಶಗಳಿಗೂ ವಿಸ್ತರಿಸಿದ ಶ್ರಮ ಹಾಗೂ ಸರ್ವಾಂಗೀಣ ಯೋಗಕ್ಷೇಮಕ್ಕಾಗಿ ತೋರಿದ ಬದ್ಧತೆಯನ್ನು ಪರಿಗಣಿಸಿ ಈ ಗೌರವವನ್ನು ನೀಡಲಾಗಿದೆ.

ಗೋವಿಂದ ಎನ್. ದೇವಾಡಿಗ ಅವರು ಕಳೆದ 25 ವರ್ಷಗಳಿಂದ ಪತಂಜಲಿ ಯೋಗ ಸಮಿತಿಯ ಸದಸ್ಯರಾಗಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದು, ಯಾವುದೇ ಪ್ರತಿಫಲದ ನಿರೀಕ್ಷೆಯಿಲ್ಲದೆ ನೂರಾರು ಯೋಗ ಶಿಬಿರಗಳನ್ನು ನಡೆಸಿದ್ದಾರೆ. ಭಟ್ಕಳ ತಾಲೂಕಿನ ಹಳ್ಳಿ-ಹಳ್ಳಿಗಳಿಗೆ ತೆರಳಿ ಎಲ್ಲಾ ವಯೋಮಾನದ ಜನರಿಗೆ ಯೋಗಾಭ್ಯಾಸದ ತರಬೇತಿ ನೀಡಿ ಆರೋಗ್ಯಕರ ಜೀವನಶೈಲಿಯ ಸಂದೇಶವನ್ನು ಹರಡುತ್ತಿದ್ದಾರೆ. ಅವರ ಸೇವೆಯಿಂದ ಅನೇಕರು ಯೋಗವನ್ನು ದೈನಂದಿನ ಜೀವನದ ಭಾಗವಾಗಿಸಿಕೊಂಡಿದ್ದಾರೆ.

ಸರಳ ವ್ಯಕ್ತಿತ್ವ, ಸೇವಾಮನೋಭಾವ ಹಾಗೂ ಶಿಸ್ತುಬದ್ಧ ಜೀವನಶೈಲಿಯಿಂದ ಜನರ ಮೆಚ್ಚುಗೆ ಗಳಿಸಿರುವ ಗೋವಿಂದ ದೇವಾಡಿಗ ಅವರಿಗೆ ರಾಷ್ಟ್ರೀಯ ಮಟ್ಟದ ಈ ಗೌರವ ಲಭಿಸಿರುವುದು ಭಟ್ಕಳದ ಜನತೆಗೆ ಹೆಮ್ಮೆಯ ವಿಷಯವಾಗಿದೆ. ಈ ಹಿನ್ನೆಲೆಯಲ್ಲಿ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಸಾಮಾಜಿಕ ಮುಖಂಡರು, ಯೋಗ ಶಿಕ್ಷಕರು, ಶಿಬಿರಾರ್ಥಿಗಳು ಹಾಗೂ ಸಾರ್ವಜನಿಕರು ಅವರನ್ನು ಅಭಿನಂದಿಸಿ, ಇನ್ನಷ್ಟು ಸೇವೆ ಸಲ್ಲಿಸುವಂತೆ ಶುಭ ಹಾರೈಸಿದ್ದಾರೆ.

Edited By : PublicNext Desk
PublicNext

PublicNext

30/07/2026 08:29 pm

Cinque Terre

5.96 K

Cinque Terre

0