ಶಿರಸಿ : ಸಾರ್ವಜನಿಕರ ಜೀವ ರಕ್ಷಣೆಗೆ ಧಾವಿಸುವ ಇಲ್ಲಿನ ಸ್ಥಳೀಯ 'ಶ್ರೀ ಮಾರಿಕಾಂಬ ಲೈಫ್ ಗಾರ್ಡ್' ತಂಡದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಶಾಸಕ ಭೀಮಣ್ಣ ನಾಯ್ಕ್ ಅವರು, ವೈಯಕ್ತಿಕವಾಗಿ ₹1 ಲಕ್ಷಕ್ಕೂ ಅಧಿಕ ಮೌಲ್ಯದ ತುರ್ತು ಸುರಕ್ಷತಾ ಸಾಮಗ್ರಿಗಳನ್ನು ವಿತರಣೆ ಮಾಡಿದರು.
ತುರ್ತು ಸಂದರ್ಭಗಳಲ್ಲಿ ಸಾರ್ವಜನಿಕರನ್ನು ರಕ್ಷಿಸುವ ವೇಳೆ ಲೈಫ್ ಗಾರ್ಡ್ ತಂಡಕ್ಕೆ ಅತ್ಯಗತ್ಯವಾದ ಸುರಕ್ಷತಾ ಪರಿಕರಗಳ ಕೊರತೆ ಇತ್ತು. ಈ ಕುರಿತು ತಂಡದ ಸದಸ್ಯರು ಶಾಸಕರಲ್ಲಿ ಈ ಹಿಂದೆ ಮನವಿ ಮಾಡಿಕೊಂಡಿದ್ದರು. ಈ ಮನವಿಯನ್ನು ಪುರಸ್ಕರಿಸಿದ ಶಾಸಕರು, ಸಾರ್ವಜನಿಕರ ಹಿತದೃಷ್ಟಿ ಹಾಗೂ ತಂಡದ ಶ್ರಮವನ್ನು ಪರಿಗಣಿಸಿ ಬುಧವಾರ ತಮ್ಮ ಕಾರ್ಯಾಲಯದಲ್ಲಿ ಸಾಮಗ್ರಿಗಳನ್ನು ಹಸ್ತಾಂತರ ಮಾಡಿದರು.
ನಂತರ ಮಾತನಾಡಿದ ಶಾಸಕ ಭೀಮಣ್ಣ ನಾಯ್ಕ್, "ಮಾರಿಕಾಂಬ ಲೈಫ್ ಗಾರ್ಡ್ ತಂಡವು ಪ್ರಾಣದ ಹಂಗನ್ನೂ ಲೆಕ್ಕಿಸದೆ ನಿಸ್ವಾರ್ಥವಾಗಿ ಸಾರ್ವಜನಿಕರ ರಕ್ಷಣೆಗೆ ಧಾವಿಸುತ್ತಿರುವುದು ಶ್ಲಾಘನೀಯ. ಅವರು ಕರ್ತವ್ಯ ನಿರ್ವಹಿಸುವಾಗ ಅವರ ಜೀವ ರಕ್ಷಣೆಯೂ ಮುಖ್ಯ. ಹೀಗಾಗಿ ಅವರ ಮನವಿಗೆ ಸ್ಪಂದಿಸಿ ಈ ಸುರಕ್ಷತಾ ಸಾಮಗ್ರಿಗಳನ್ನು ನೀಡಲಾಗಿದೆ" ಎಂದರು.
ಈ ಸಂದರ್ಭದಲ್ಲಿ ಎಸಿ ಚಂದ್ರಶೇಖರ್ ಆರ್. ಜಿ., ಡಿವೈಎಸ್ಪಿ ಶ್ರೀಮತಿ ಗೀತಾ ಪಾಟೀಲ್, ತಾಲೂಕು ಗ್ಯಾರಂಟಿ ಸಮಿತಿಯ ಅಧ್ಯಕ್ಷೆ ಶ್ರೀಮತಿ ಸುಮಾ ಉಗ್ರಾಣಕರ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಜಗದೀಶ್ ಗೌಡ, ಬಗರ್ ಹುಕುಂ ಸಮಿತಿಯ ಸದಸ್ಯ ಎಸ್. ಕೆ. ಭಾಗವತ್ ಸೇರಿದಂತೆ ಮಾರಿಕಾಂಬ ಲೈಫ್ ಗಾರ್ಡ್ ತಂಡದ ಸದಸ್ಯರು ಉಪಸ್ಥಿತರಿದ್ದರು.
PublicNext
05/08/2026 02:22 pm
LOADING...