ಮಂಗಳೂರು: ಕರಾವಳಿ ಕರ್ನಾಟಕದ ಕೆಲ ಜಲಾನಯನ ಪ್ರದೇಶಗಳಲ್ಲಿ ಮುಂದಿನ 24 ಗಂಟೆಗಳಲ್ಲಿ ಮಧ್ಯಮ ಮಟ್ಟದ ಆಕಸ್ಮಿಕ ಪ್ರವಾಹ ಸಂಭವಿಸುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ)ಯ ಫ್ಲ್ಯಾಶ್ ಫ್ಲಡ್ ಗೈಡನ್ಸ್ ಸೆಲ್ ಮುನ್ಸೂಚನೆ ನೀಡಿದೆ.
ಆಗಸ್ಟ್ 2ರಂದು ಬೆಳಗ್ಗೆ 11.30ರವರೆಗೆ ಅನ್ವಯವಾಗುವ ಈ ಮಾರ್ಗದರ್ಶಿ ಬುಲೆಟಿನ್‌ನಲ್ಲಿ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಕೆಲವು ಜಲಾನಯನ ಪ್ರದೇಶಗಳಲ್ಲಿ ಆಕಸ್ಮಿಕ ಪ್ರವಾಹದ ಅಪಾಯ ಇರುವುದಾಗಿ ತಿಳಿಸಲಾಗಿದೆ. ಇದೇ ವೇಳೆ ದಕ್ಷಿಣ ಒಳನಾಡು ಕರ್ನಾಟಕದ ಚಿಕ್ಕಮಗಳೂರು, ಕೊಡಗು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿಯೂ ಮಧ್ಯಮ ಮಟ್ಟದ ಪ್ರವಾಹದ ಸಾಧ್ಯತೆ ವ್ಯಕ್ತಪಡಿಸಲಾಗಿದೆ. ನಿರೀಕ್ಷಿತ ಭಾರೀ ಮಳೆಯ ಹಿನ್ನೆಲೆಯಲ್ಲಿ ಈಗಾಗಲೇ ನೀರಿನಿಂದ ಸಂಪೂರ್ಣ ತೇವಗೊಂಡಿರುವ ಪ್ರದೇಶಗಳು ಹಾಗೂ ತಗ್ಗು ಪ್ರದೇಶಗಳಲ್ಲಿ ಮೇಲ್ಮೈ ನೀರಿನ ಹರಿವು ಹೆಚ್ಚಾಗಿ ಜಲಾವೃತ ಸ್ಥಿತಿ ಉಂಟಾಗುವ ಸಾಧ್ಯತೆ ಇದೆ ಎಂದು ಇಲಾಖೆ ತಿಳಿಸಿದೆ.
ಅದರ ಹೊರತಾಗಿಯೂ ಇದೊಂದು ಕೇವಲ ಮಾರ್ಗದರ್ಶಿ ಬುಲೆಟಿನ್ ಆಗಿದ್ದು, ಆಕಸ್ಮಿಕ ಪ್ರವಾಹದ ಅಧಿಕೃತ ಎಚ್ಚರಿಕೆಯಲ್ಲ ಎಂದು ಭಾರತೀಯ ಹವಾಮಾನ ಇಲಾಖೆ ಸ್ಪಷ್ಟಪಡಿಸಿದೆ. ಆದರೂ ಸಾರ್ವಜನಿಕರು, ವಿಶೇಷವಾಗಿ ನದಿ ತೀರ ಹಾಗೂ ತಗ್ಗು ಪ್ರದೇಶಗಳಲ್ಲಿ ವಾಸಿಸುವವರು ಎಚ್ಚರಿಕೆ ವಹಿಸಿ, ಸ್ಥಳೀಯ ಆಡಳಿತ ಮತ್ತು ವಿಪತ್ತು ನಿರ್ವಹಣಾ ಇಲಾಖೆಯ ಸೂಚನೆಗಳನ್ನು ಪಾಲಿಸುವಂತೆ ಮನವಿ ಮಾಡಲಾಗಿದೆ.
PublicNext
01/08/2026 02:40 pm
LOADING...