ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಾಪುರ: ಐಆರ್ಬಿ ನಿರ್ಲಕ್ಷ್ಯಕ್ಕೆ ಗ್ರಾಮಸ್ಥರ ಆಕ್ರೋಶ - ತಡೆಗೋಡೆ, ಒಳಚರಂಡಿ ನಿರ್ಮಾಣಕ್ಕೆ ಆಗ್ರಹ

ಕುಂದಾಪುರ: ಇಲ್ಲಿನ ಮೀನು ಮಾರ್ಕೆಟ್ ರಸ್ತೆಯಿಂದ ಹಳೆ ಆದರ್ಶ ಮತ್ತು ಕೆ.ಎಸ್.ಆರ್.ಟಿ.ಸಿ ಬಸ್ಸ್ಟಾಂಡ್ನಿಂದ ಹರಿದು ಬರುವ ಒಳ ಚರಂಡಿಗೆ ಸರಿಯಾದ ರಸ್ತೆ ಸಂಪರ್ಕ ಇಲ್ಲದೇ ಇರುವುದರಿಂದ ಪ್ರತಿನಿತ್ಯ ಸಮಸ್ಯೆಗಳುಂಟಾಗುತ್ತಿದ್ದು, ಭಾರೀ ಮಳೆಯ ಕಾರಣದಿಂದಾಗಿ ಕೃತಕ ನೆರೆ ಸೃಷ್ಟಿಯಾಗಿದೆ. ಸ್ಥಳೀಯರೊಬ್ಬರ ಆವರಣ ಗೋಡೆ ಕುಸಿದು ಬಿದ್ದಿದೆ. ಅಲ್ಲದೇ ಹಳೆಯ ಆದರ್ಶ ಆಸ್ಪತ್ರೆಯ ಎದುರುಗಡೆ ಸುಮಾರು 20 ವರ್ಷಗಳ ಹಿಂದೆ ನಿರ್ಮಿಸಲಾಗಿದ್ದ ತಡೆಗೋಡೆ ಶಿಥಿಲಗೊಂಡಿದ್ದು, ಕುಸಿದು ಬೀಳುವ ಸ್ಥಿತಿ ತಲುಪಿದೆ. ಅಲ್ಲದೇ ಅದರ ಅಕ್ಕಪಕ್ಕದಲ್ಲಿ ರಸ್ತೆ ಹಾಗೂ ಮನೆಗಳಿದ್ದು ಕುಸಿಯುವ ಭೀತಿ ಎದುರಿಸುತ್ತಿವೆ.

ಐಆರ್ಬಿ ಕಾಮಗಾರಿ ನಿರ್ಲಕ್ಷ್ಯದಿಂದಾಗಿ ಈ ಭಾಗದಲ್ಲಿ ಒಳಚರಂಡಿ ವ್ಯವಸ್ಥೆ ಮಾಡದ ಪರಿಣಾಮ ಮತ್ತು ಸರ್ವೀಸ್ ರಸ್ತೆ ನಿರ್ಮಿಸದೇ ಇದ್ದ ಪರಿಣಾಮ ಅವಾಂತರಗಳಾಗುತ್ತಿದ್ದು, ಮೇಲ್ಭಾಗದ ಮನೆಗಳ ತ್ಯಾಜ್ಯಗಳೂ ಇದೇ ಚರಂಡಿಯಲ್ಲಿ ಬಂದು ಶೇಖರಣೆಯಾಗುತ್ತಿರುವುದರಿಂದ ಬೇಸಿಗೆಯಲ್ಲಿಯೂ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮಗಳುಂಟಾಗುತ್ತಿವೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ.

ಇದೆಲ್ಲದರ ಜೊತೆಗೆ ಸೋಮವಾರದಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕುಂದಾಪುರ ಪುರಸಭಾ ವ್ಯಾಪ್ತಿಯ ಜನಜೀವನ ಅಸ್ತವ್ಯಸ್ತವಾಗಿದೆ. ಒಳಚರಂಡಿ ಸಮಸ್ಯೆಯಿಂದಾಗಿ ಮಳೆಯ ನೀರೆಲ್ಲಾ ರಸ್ತೆ ಹಾಗೂ ಮನೆಗಳಿಗೆ ನುಗ್ಗಿದ್ದು, ಅಪಾರ ಹಾನಿ ಉಂಟಾಗಿದೆ. ಬೃಹತ್ ಗಾತ್ರದ ತೆಂಗಿನ ಮರವೊಂದು ಧರೆಗುರುಳಿದ ಪರಿಣಾಮ ವಿದ್ಯುತ್ ತಂತಿಗಳು ತುಂಡಾಗಿದ್ದು, ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.

ಮಳೆ ನೀರಿನ ಜೊತೆಗೆ ಚಂರಂಡಿಯಲ್ಲಿ ಸಂಗ್ರಹಗೊಂಡ ಕೊಳಚೆ ನೀರಿನ ಮಿಶ್ರಣ ಈಗ ಮನೆಗಳಿಗೆ ನುಗ್ಗುತ್ತಿದ್ದು, ಸಾಂಕ್ರಾಮಿಕ ರೋಗದ ಭೀತಿ ಉಂಟಾಗಿದೆ. ಇನ್ನಾದರೂ ಒಳ ಚರಂಡಿಯನ್ನು ನಿರ್ಮಿಸಿ, ಸರ್ವೀಸ್ ರಸ್ತೆ ನಿರ್ಮಿಸುವ ಮೂಲಕ ಸ್ಥಳೀಯ ನಿವಾಸಿಗಳಿಗೆ ಹಾಗೂ ನಿತ್ಯ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವಲ್ಲಿ ಸಂಬಂಧಪಟ್ಟವರು ಪ್ರಾಮಾಣಿಕ ಪ್ರಯತ್ನ ಮಾಡುವರೇ ಕಾದು ನೋಡಬೇಕಿದೆ.

ವಿಶೇಷ ವರದಿ: ಜಯಶೇಖರ್ ಮಡಪ್ಪಾಡಿ, ಪಬ್ಲಿಕ್ ನೆಕ್ಸ್ಟ್, ಕುಂದಾಪುರ

Edited By :
PublicNext

PublicNext

04/08/2026 09:42 pm

Cinque Terre

19.82 K

Cinque Terre

0

ಸಂಬಂಧಿತ ಸುದ್ದಿ