ವಿಜಯಪುರ: 1956ರಲ್ಲಿ ಕರ್ನಾಟಕ ವಿಧಾನ ಪರಿಷತ್ ಅಸ್ತಿತ್ವಕ್ಕೆ ಬಂದ ನಂತರ ಇಂದಿನವರೆಗೆ ಯಾವುದೇ ಸಭಾಪತಿಯ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದ ಉದಾಹರಣೆ ಇಲ್ಲ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ವಿಜಯಪುರದಲ್ಲಿ ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 1956ರಿಂದ ಇಲ್ಲಿಯವರೆಗೆ ಎಲ್ಲ ಸಭಾಪತಿಗಳೂ ತಮ್ಮ ಪೂರ್ಣಾವಧಿಯನ್ನು ಮುಗಿಸಿದ್ದಾರೆ. ಇದೀಗ ತಮ್ಮ ವಿರುದ್ಧ ಅವಿಶ್ವಾಸ ನಿರ್ಣಯದ ಪ್ರಸ್ತಾಪ ಮಾಡುತ್ತಿರುವುದು ಹೊಸ ಬೆಳವಣಿಗೆಯಾಗಿದೆ ಎಂದು ದಾಖಲೆಗಳನ್ನು ಪ್ರದರ್ಶಿಸಿದರು.
ಸಭಾಪತಿ ಹುದ್ದೆ ಸಂವಿಧಾನಾತ್ಮಕ ಹುದ್ದೆ. ಆ ಸ್ಥಾನದಲ್ಲಿ ಕುಳಿತವರು ಯಾವುದೇ ಪಕ್ಷದವರಾಗಿದ್ದರೂ ಸಂವಿಧಾನದ ಪ್ರಕಾರ ತಟಸ್ಥವಾಗಿ ನಡೆದುಕೊಳ್ಳಬೇಕು. ಪಕ್ಷದ ಪರವಾಗಿ ಕೆಲಸ ಮಾಡಬೇಕು ಎಂಬ ಪ್ರಶ್ನೆಯೇ ಇಲ್ಲ.
ಅವಿಶ್ವಾಸ ನಿರ್ಣಯ ಮಂಡಿಸಲು ಸೂಕ್ತ ಕಾರಣ ಇರಬೇಕು. "ಭ್ರಷ್ಟಾಚಾರ, ಪಕ್ಷಪಾತ ಅಥವಾ ಬೇರೆ ಯಾವುದೇ ಗಂಭೀರ ಆರೋಪಗಳಿದ್ದರೆ ಮಾತ್ರ ಅಂತಹ ಕ್ರಮಕ್ಕೆ ಅರ್ಥ ಇರುತ್ತದೆ. ನನ್ನ ವಿರುದ್ಧ ಅಂತಹ ಯಾವುದೇ ಆರೋಪಗಳಿಲ್ಲ. ಕೇವಲ ವಿಶ್ವಾಸ ಇಲ್ಲ ಎನ್ನುವುದರಿಂದ ಮಾತ್ರ ಅವಿಶ್ವಾಸ ನಿರ್ಣಯ ತರಲು ಸಾಧ್ಯವಿಲ್ಲ ಎಂದರು.
ನನ್ನ ಗೌರವಕ್ಕಿಂತ ಯಾವುದೇ ಹುದ್ದೆ ದೊಡ್ಡದಲ್ಲ. ನೋಟಿಸ್ ನೋಡಿದ ಕೂಡಲೇ ಅಗತ್ಯವೆನಿಸಿದರೆ ಒಂದು ಕ್ಷಣದಲ್ಲಿ ರಾಜೀನಾಮೆ ನೀಡಿ ಮನೆಗೆ ಹೋಗುತ್ತೇನೆ. ನಾನು ಹಲವು ಬಾರಿ ಸಚಿವನಾಗಿದ್ದೇನೆ, ಮೂರು ಬಾರಿ ಸಭಾಪತಿಯಾಗಿದ್ದೇನೆ, ಎಂಟು ಬಾರಿ ಶಾಸಕನಾಗಿದ್ದೇನೆ. ಗೌರವಕ್ಕೆ ಧಕ್ಕೆಯಾಗುವ ರೀತಿಯಲ್ಲಿ ಹುದ್ದೆಯಲ್ಲಿ ಮುಂದುವರಿಯುವ ಉದ್ದೇಶ ನನಗಿಲ್ಲ ಎಂದು ಹೇಳಿದರು.
PublicNext
29/07/2026 10:19 pm
LOADING...