ತುಮಕೂರು: ನಗರದ 27 ಪರೀಕ್ಷಾ ಕೇಂದ್ರಗಳಲ್ಲಿ ಆಗಸ್ಟ್ 2 ರಂದು ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಪೊಲೀಸ್ ಕಾನ್ಸ್ಟೇಬಲ್ (ಸಿವಿಲ್) ಹುದ್ದೆಗಳ ನೇರ ನೇಮಕಾತಿಗಾಗಿ ನಡೆಯಲಿರುವ ಲಿಖಿತ ಪರೀಕ್ಷೆಯನ್ನು ಸಿಸಿಟಿವಿ ಕಣ್ಗಾವಲಿನಲ್ಲಿ ನಡೆಸಬೇಕೆಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ನ್ಯಾಯಾಲಯ ಸಭಾಂಗಣದಲ್ಲಿ ಪೂರ್ವಭಾವಿ ಸಿದ್ಧತೆಗಳ ಬಗ್ಗೆ ನಡೆದ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಪರೀಕ್ಷೆಯ ಪಾರದರ್ಶಕತೆ ಹಾಗೂ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಪರೀಕ್ಷಾ ಕೇಂದ್ರಗಳ ಸಿಸಿಟಿವಿ ದೃಶ್ಯಗಳನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯಲ್ಲಿ ಮೂಲಕ ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುವುದು ಎಂದು ತಿಳಿಸಿದರು.
ಪರೀಕ್ಷೆಯನ್ನು ಸುಸೂತ್ರ, ಶಾಂತಿಯುತ, ಪಾರದರ್ಶಕ ಹಾಗೂ ನಿಷ್ಪಕ್ಷಪಾತವಾಗಿ ನಡೆಸಲು ಎಲ್ಲಾ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಪರೀಕ್ಷಾ ಪ್ರಕ್ರಿಯೆಯಲ್ಲಿ ಯಾವುದೇ ಲೋಪ ಉಂಟಾಗದAತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಹಾಗೂ ಸರ್ಕಾರದ ಎಲ್ಲಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ನಿರ್ದೇಶನ ನೀಡಿದರು.
ಪರೀಕ್ಷಾ ಕೇಂದ್ರಗಳಲ್ಲಿ ಅಭ್ಯರ್ಥಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಸಮರ್ಪಕ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕು. ಶುದ್ಧ ಕುಡಿಯುವ ನೀರು, ನಿರಂತರ ವಿದ್ಯುತ್ ಸರಬರಾಜು, ಶೌಚಾಲಯ ವ್ಯವಸ್ಥೆ, ಆರೋಗ್ಯ ಇಲಾಖೆಯಿಂದ ವೈದ್ಯಕೀಯ ನೆರವು, ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ಸಿದ್ಧತೆ ಸೇರಿದಂತೆ ಎಲ್ಲಾ ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸುವಂತೆ ಸಂಬAಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಪರೀಕ್ಷಾ ಕೇಂದ್ರಗಳಲ್ಲಿ ಕಲ್ಪಿಸಲಾಗಿರುವ ಮೂಲಸೌಲಭ್ಯಗಳನ್ನು ಪರಿಶೀಲಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಎಲ್ಲಾ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ, ಲಭ್ಯವಿರುವ ಸೌಲಭ್ಯಗಳ ಬಗ್ಗೆ ಜಿಪಿಎಸ್ ಆಧಾರಿತ ಛಾಯಾಚಿತ್ರಗಳೊಂದಿಗೆ ವರದಿ ಸಲ್ಲಿಸಬೇಕೆಂದು ಸೂಚಿಸಿದರು.
ಸಭೆಯಲ್ಲಿ ಪರೀಕ್ಷಾ ಕೇಂದ್ರಗಳಲ್ಲಿನ ಸಿಸಿಟಿವಿ ದೃಶ್ಯಗಳನ್ನು ಹಾರ್ಡ್ ಡಿಸ್ಕ್ನಲ್ಲಿ ಸಂಗ್ರಹಿಸಿ ನೇರ ಪ್ರಸಾರದ ಮೂಲಕ ಮಾತ್ರ ಮೇಲ್ವಿಚಾರಣೆ ನಡೆಸುವ ವ್ಯವಸ್ಥೆ ಕುರಿತು ಸಭೆಯಲ್ಲಿ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಲಾಯಿತು.
ಹೊರ ಜಿಲ್ಲೆಗಳಿಂದ ಆಗಮಿಸುವ ಅಭ್ಯರ್ಥಿಗಳ ಅನುಕೂಲಕ್ಕಾಗಿ ಶಿಕ್ಷಣ ಇಲಾಖೆಯಿಂದ ತುಮಕೂರು ರೈಲ್ವೆ ನಿಲ್ದಾಣ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಹಾಗೂ ಖಾಸಗಿ ಬಸ್ ನಿಲ್ದಾಣಗಳಲ್ಲಿ ಮಾಹಿತಿ ಮತ್ತು ಮಾರ್ಗದರ್ಶನ ನೀಡುವ ಸೌಲಭ್ಯ ಕೇಂದ್ರಗಳನ್ನು ಸ್ಥಾಪಿಸಿ, ಅಗತ್ಯ ಮಾಹಿತಿ ಹಾಗೂ ಸಹಾಯವನ್ನು ಒದಗಿಸುವಂತೆ ನಿರ್ದೇಶಿಸಲಾಯಿತು.
ಪ್ರಶ್ನೆಪತ್ರಿಕೆಗಳ ಸುರಕ್ಷಿತ ಸಾಗಣೆ ಹಾಗೂ ವಿತರಣೆಗೆ ಸಂಬಂಧಿಸಿದಂತೆ ಯಾವುದೇ ಸಂದರ್ಭದಲ್ಲಿಯೂ ಪೊಲೀಸ್ ಎಸ್ಕಾರ್ಟ್ ವಾಹನಗಳಿಲ್ಲದೆ ಪ್ರಶ್ನೆಪತ್ರಿಕೆ ಸಾಗಣೆ ವಾಹನಗಳು ಸಂಚರಿಸಬಾರದು. ಪರೀಕ್ಷಾ ಸಾಮಗ್ರಿಗಳ ಸುರಕ್ಷತೆಯಲ್ಲಿ ಯಾವುದೇ ರಾಜಿ ಮಾಡಿಕೊಳ್ಳಬಾರದು ಎಂದು ಅಧಿಕಾರಿಗಳಿಗೆ ಸೂಚಿಸಲಾಯಿತು.
ಸರ್ಕಾರ ನಿಗದಿಪಡಿಸಿರುವ ಪರೀಕ್ಷಾ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ಪರೀಕ್ಷೆಯ ಪಾವಿತ್ರ‍್ಯವನ್ನು ಕಾಪಾಡುವ ನಿಟ್ಟಿನಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಅಭ್ಯರ್ಥಿಗಳ ಅನುಕೂಲಕ್ಕಾಗಿ ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸಿ, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಲ್ಲ ಇಲಾಖೆಗಳು ಪರಸ್ಪರ ಸಹಕಾರದೊಂದಿಗೆ ಕಾರ್ಯನಿರ್ವಹಿಸಿ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸುವಂತೆ ಅವರು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್, ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಖಜಾನೆ ಉಪನಿರ್ದೇಶಕಿ ಉಮಾ, ಆರೋಗ್ಯ ಇಲಾಖೆ, ಸಾರಿಗೆ ಇಲಾಖೆ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ, ಬೆಸ್ಕಾಂ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರು ಉಪಸ್ಥಿತರಿದ್ದರು.
PublicNext
31/07/2026 08:31 am