ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬರ ಪರಿಸ್ಥಿತಿ, ಮುಂಗಾರು ಹಂಗಾಮು ಹಾಗೂ ಕುಡಿಯುವ ನೀರಿನ ನಿರ್ವಹಣೆ ಸಮರ್ಪಕವಾಗಿ ಕೈಗೊಳ್ಳಲು ಜಿಲ್ಲಾಧಿಕಾರಿ ಸೂಚನೆ

ತುಮಕೂರು: ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿಗಳಾದ ಶ್ರೀಮತಿ ಶುಭ ಕಲ್ಯಾಣ್ ಅವರು ಜಿಲ್ಲಾಧಿಕಾರಿಗಳ ಕಚೇರಿಯ ಕೆಎಸ್‌ಡಬ್ಲ್ಯೂಎಎನ್ (KSWAN) ವಿಡಿಯೋ ಕಾನ್ಫರೆನ್ಸ್ ಮೂಲಕ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ಬರ ಪರಿಸ್ಥಿತಿ, ತಾಲ್ಲೂಕು ಮಟ್ಟದ ಟಾಸ್ಕ್ ಫೋರ್ಸ್ ಕಾರ್ಯಚಟುವಟಿಕೆಗಳು, ಮುಂಗಾರು ಹಂಗಾಮು, ಕೋವಿಡ್ ಮುನ್ನೆಚ್ಚರಿಕೆ ಹಾಗೂ ಕುಡಿಯುವ ನೀರಿನ ನಿರ್ವಹಣೆ ಕುರಿತು ಪರಿಶೀಲನಾ ಸಭೆ ನಡೆಸಿದರು.

ಸಭೆಯಲ್ಲಿ ಜಿಲ್ಲೆಯ ಮಳೆಯ ಸ್ಥಿತಿ, ಕುಡಿಯುವ ನೀರಿನ ಲಭ್ಯತೆ ಹಾಗೂ ವಿವಿಧ ಇಲಾಖೆಗಳ ಸಿದ್ಧತೆ ಕುರಿತು ಸಮಗ್ರ ಪರಿಶೀಲನೆ ನಡೆಸಿ ಅಗತ್ಯ ಸೂಚನೆಗಳನ್ನು ನೀಡಿದರು. ತುರ್ತು ಕುಡಿಯುವ ನೀರಿನ ಕ್ರಿಯಾ ಯೋಜನೆ (CAP) ಅಡಿಯಲ್ಲಿ ಕೈಗೊಳ್ಳಲಾಗುತ್ತಿರುವ ಕೊಳವೆಬಾವಿ ಕಾಮಗಾರಿಗಳ ಪ್ರಗತಿಯನ್ನು ಪರಿಶೀಲಿಸಿದ ಜಿಲ್ಲಾಧಿಕಾರಿಗಳು, ಜಿಲ್ಲೆಯಲ್ಲಿ ಒಟ್ಟು 202 ಕೊಳವೆಬಾವಿಗಳಿಗೆ ಅನುಮೋದನೆ ದೊರೆತಿದ್ದು, ಇದುವರೆಗೆ 189 ಕೊಳವೆಬಾವಿಗಳನ್ನು ಕೊರೆದಿದ್ದು, ಅವುಗಳಲ್ಲಿ 130 ಯಶಸ್ವಿಯಾಗಿ ನೀರು ದೊರೆತಿವೆ ಹಾಗೂ 59 ವಿಫಲವಾಗಿವೆ ಎಂದು ತಿಳಿಸಿದರು.

ಇನ್ನೂ 13 ಕೊಳವೆಬಾವಿಗಳ ಕೊರೆಯುವ ಕಾರ್ಯ ಬಾಕಿಯಿದ್ದು, 118 ಕೊಳವೆಬಾವಿಗಳನ್ನು ಸಾರ್ವಜನಿಕ ಬಳಕೆಗೆ ಸಿದ್ಧಗೊಳಿಸಲಾಗಿದೆ. ಕೊಳವೆಬಾವಿ ಕೊರೆದ ಎಲ್ಲ ಸ್ಥಳಗಳನ್ನು ಹೋಬಳಿ ನೋಡಲ್ ಅಧಿಕಾರಿಗಳು, ತಹಶೀಲ್ದಾರರು ಹಾಗೂ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಜಿಪಿಎಸ್ ಫೋಟೋ ಹಾಗೂ ವಿಡಿಯೋ ಸಮೇತ ನಾಲ್ಕು ದಿನಗಳೊಳಗೆ ವರದಿ ಸಲ್ಲಿಸುವಂತೆ ಸೂಚಿಸಿದರು.

ಮಳೆಯ ಕೊರತೆ ಮತ್ತು ಕುಡಿಯುವ ನೀರಿನ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ಅಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡಿ ಸಾರ್ವಜನಿಕರೊಂದಿಗೆ ಚರ್ಚಿಸಿ ಉಳಿದ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸುವಂತೆ ನಿರ್ದೇಶನ ನೀಡಿದರು. ಅಪರ ಜಿಲ್ಲಾಧಿಕಾರಿಗಳು ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸರಬರಾಜು ವ್ಯವಸ್ಥೆಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುವಂತೆ ಸೂಚಿಸಿದರು.

ಮುಂಗಾರು ಹಂಗಾಮಿನ ಋತುಮಾನ ಪರಿಸ್ಥಿತಿ, ಬಿತ್ತನೆ ಪ್ರಗತಿ, ಬೀಜ ಮತ್ತು ರಸಗೊಬ್ಬರಗಳ ಲಭ್ಯತೆ ಕುರಿತು ಪರಿಶೀಲನೆ ನಡೆಸಿ ರೈತರಿಗೆ ಅಗತ್ಯ ಕೃಷಿ ಪರಿಕರಗಳು ಸಕಾಲದಲ್ಲಿ ದೊರೆಯುವಂತೆ ಕ್ರಮವಹಿಸಲು ನಿರ್ದೇಶಿಸಲಾಯಿತು. ಬೆಳೆ ಸಮೀಕ್ಷೆಯ ಬಾಕಿ ಪ್ರಕರಣಗಳನ್ನು ಒಂದು ವಾರದೊಳಗೆ ಪೂರ್ಣಗೊಳಿಸುವಂತೆ ಜಿಲ್ಲೆಯ ಎಲ್ಲಾ ತಹಶೀಲ್ದಾರರಿಗೆ ಸೂಚಿಸಲಾಯಿತು.

ಜಿಲ್ಲೆಯಲ್ಲಿ ಮಳೆ ಪ್ರಮಾಣ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗದಂತೆ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಚರ್ಚಿಸಲಾಯಿತು. ಈ ವೇಳೆ ಪಶು ಸಂಗೋಪನೆ ಮತ್ತು ಪಶುವೈದ್ಯಕೀಯ ಇಲಾಖೆ ಹಾಗೂ ತುಮಕೂರು ಹಾಲು ಒಕ್ಕೂಟದ ಅಧಿಕಾರಿಗಳೊಂದಿಗೆ ಮೇವಿನ ಬೀಜದ ಮಿನಿಕಿಟ್ ಪೂರೈಕೆ ಕುರಿತು ಚರ್ಚಿಸಿ, ಎರಡು ದಿನಗಳೊಳಗೆ ಸರಬರಾಜು ಮಾಡುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ. ಎನ್. ತಿಪ್ಪೇಸ್ವಾಮಿ, ಉಪವಿಭಾಗಾಧಿಕಾರಿ ನಹೀದಾ ಝಮ್ ಝಮ್, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ (ಅಭಿವೃದ್ಧಿ) ಸಂಜೀವಪ್ಪ ಕೆ.ಪಿ. ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Edited By : PublicNext Desk
PublicNext

PublicNext

05/08/2026 08:45 am

Cinque Terre

2.87 K

Cinque Terre

0

ಸಂಬಂಧಿತ ಸುದ್ದಿ