ಸಿದ್ದಾಪುರ: ತಾಲೂಕಿನ ಮಾವಿನಗುಂಡಿ ಶಾಖೆಯ ಹಲಗೇರಿ ಸಮೀಪದ ಹುಸೂರು ಅರಣ್ಯ ಸರ್ವೆ ಸಂಖ್ಯೆ ೧೫೧ರ ಕಾಯ್ದಿಟ್ಟ ಅರಣ್ಯ ಭೂಮಿಯನ್ನು ಕೃಷ್ಣ ದ್ಯಾವ ನಾಯ್ಕ ಹಲಗೇರಿ ಅವರು ಅರಣ್ಯಭೂಮಿಯನ್ನು ಅರಣ್ಯೇತರ ಉದ್ದೇಶಕ್ಕಾಗಿ ಬಳಸಿರುವ ಹಿನ್ನೆಲೆಯಲ್ಲಿ
ಜು. ೩೦ರಂದು ವಶಕ್ಕೆ ಪಡೆದು ಆ ಪ್ರದೇಶದಲ್ಲಿ ಇಲಾಖೆಯಿಂದ ಗಿಡಗಳನ್ನು ನೆಡಲಾಗಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ.
ಈ ಕುರಿತು ಅರಣ್ಯ ಇಲಾಖೆ ಪ್ರಕಟಣೆ ಹೊರಡಿಸಿದ್ದು, ಹಲಗೇರಿಯ ಕೃಷ್ಣ ದ್ಯಾವ ನಾಯ್ಕ ಪರ ವಕೀಲರು ಮೇಲ್ಮನವಿ ಪ್ರಾಧಿಕಾರದಲ್ಲಿ ಹಲವು ವಿಚಾರಣೆಗಳಲ್ಲಿ ಸಮಯಾವಕಾಶವನ್ನು ಕೋರಿದ್ದರೆ ಹೊರತು ಅಗತ್ಯ ದಾಖಲೆಗಳನ್ನು ಹಾಜರುಪಡಿಸಲು ಮತ್ತು ವಾದ ಮಂಡಿಸಲು ವಿಫಲರಾಗಿದ್ದರು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕೃಷ್ಣ ಅವರು ಯಾವುದೇ ಭೂ ಮಂಜೂರಾತಿ ಪಡೆಯದೇ ಕೇಂದ್ರ ಸರಕಾರದ ಅರಣ್ಯ ಸಂರಕ್ಷಣಾ ಕಾಯಿದೆ ೧೯೮೦ ಹಾಗೂ ಅರಣ್ಯ ಹಕ್ಕುಗಳ ಅಧಿನಿಯಮ ೨೦೦೬ರಡಿ ಯಾವುದೇ ಅಧಿಕೃತ ಹಕ್ಕುಪತ್ರ ಹೊಂದಿರಲಿಲ್ಲ ಎನ್ನುವುದು ವಿಚಾರಣೆಯಲ್ಲಿ ಧೃಡಪಟ್ಟಿದ್ದು, ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ ತೀರ್ಪುಗಳ ಅನ್ವಯ ಕಾಯ್ದಿಟ್ಟ ಅರಣ್ಯಭೂಮಿಯನ್ನು ಒತ್ತುವರಿದಾರರು ಪ್ರತಿಕೂಲ ಸ್ವಾಧೀನ ಅಥವಾ ಹಕ್ಕು ಪ್ರತಿಪಾದಿಸಲು ಅವಕಾಶವಿಲ್ಲ. ಈ ಎಲ್ಲ ಅಂಶಗಳನ್ನು ಪರಿಗಣಿಸಿ ಕೃಷ್ಣ ಅವರು ಸ್ವಂತ ಖರ್ಚಿನಲ್ಲಿ ಒತ್ತುವರಿ ತೆರವುಗೊಳಿಸಿ ಅರಣ್ಯ ಇಲಾಖೆಗೆ ಹಸ್ತಾಂತರಿಸಬೇಕು. ಇಲ್ಲವಾದಲ್ಲಿ ಇಲಾಖೆಯಿಂದ ಕ್ರಮ ಜರುಗಿಸಲಾಗುವುದು ಎಂದು ಕೆನರಾ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ಮೇಲ್ಮನವಿ ಪ್ರಾಧಿಕಾರವು ಆದೇಶ ನೀಡಿತ್ತು ಪ್ರಕಟಣೆಯಲ್ಲಿ ವಿವರಿಸಲಾಗಿದೆ.
ಈ ಅತಿಕ್ರಮಣ ತೆರವುಗೊಳಿಸುವ ಸದರಿ ಪ್ರದೇಶವು ಹುಸೂರ ಅಣೆಕಟ್ಟೆಯ ಸಮೀಪದ ವರದಾ ನದಿ ಜಲಾನಯನ ಪ್ರದೇಶದ ಪರಿಸರದ ದೃಷ್ಟಿಯಿಂದ ಅತಿಸೂಕ್ಷ್ಮ ಪ್ರದೇಶವಾಗಿರುತ್ತದೆ. ಈ ಪ್ರದೇಶವು ಜಲಾನಯನ ಸಂರಕ್ಷಣೆ, ಜೀವ ವೈವಿಧ್ಯ ಸಂರಕ್ಷಣೆ, ವನ್ಯಜೀವಿ ಸಂರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಜು. ೩೦ರಂದು ನಡೆದ ಕಾರ್ಯಾಚರಣೆಯಲ್ಲಿ ಸಂದೀಪ್ ಹೆಚ್. ಸೂರ್ಯವಂಶಿ (ಐ.ಎಫ್.ಎಸ್) ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಶಿರಸಿ ವಿಭಾಗ ಮತ್ತು ಅಮಿತ್ ಕುಮಾರ ಚವ್ಹಾಣ್ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳ ಮಾರ್ಗದರ್ಶನದಲ್ಲಿ, ಸಿದ್ದಾಪುರ ವಲಯ ಅರಣ್ಯಾಧಿಕಾರಿ ಉಷಾ ಕಬ್ಬೆರ ಇವರ ನೇತೃತ್ವದಲ್ಲಿ ವಲಯದ ಎಲ್ಲಾ ಉಪ ವಲಯ ಅರಣ್ಯಾಧಿಕಾರಿಗಳು, ಗಸ್ತು ಅರಣ್ಯ ಪಾಲಕರು ಮತ್ತು ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ತೆರವು ಕಾರ್ಯಾರಣೆ ಸಮಯದಲ್ಲಿ ಪೋಲಿಸ್ ಸಿಬ್ಬಂದಿಗಳು, ಕಂದಾಯ ಇಲಾಖಾ ಸಿಬ್ಬಂದಿಗಳು ಮತ್ತು ಭೂ ಮಾಪಕರು ಸ್ಥಳದಲ್ಲಿ ಹಾಜರಿದ್ದರು.
Kshetra Samachara
01/08/2026 10:03 pm