ಬೆಂಗಳೂರು: ನೆಲಮಂಗಲದ ಅರಿಶಿನಕುಂಟೆಯಲ್ಲಿರುವ ರಾಜ್ಯ ರಸ್ತೆ ಸಾರಿಗೆ ಬಸ್ ನಿಲ್ದಾಣದ ಬಳಿ ಬಸ್ ಹತ್ತಲು ಪ್ರಯತ್ನಿಸುತ್ತಿದ್ದ ಭಿಕ್ಷುಕರೊಬ್ಬರಿಗೆ ಬಿಎಂಟಿಸಿ ನಿರ್ವಾಹಕ ಒದ್ದಿರುವ ವಿಡಿಯೋ ವೈರಲ್ ಆಗಿದೆ. ಇನ್ನೂ ಕಂಡಕ್ಟರ್ ಈ ರೀತಿ ಅಸಭ್ಯವಾಗಿ ವರ್ತಿಸಿ, ಬಸ್‌ನಿಂದ ಹೊರಗೆ ತಳ್ಳಿ ದೈಹಿಕ ಹಲ್ಲೆ ನಡೆಸಿದ ಆರೋಪದ ಮೇಲೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಕೆಲಸದಿಂದ ಸಸ್ಪೆಂಡ್ (ಅಮಾನತು) ಮಾಡಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ದೌರ್ಜನ್ಯದ ವಿಡಿಯೋ ವ್ಯಾಪಕವಾಗಿ ವೈರಲ್ ಆಗಿ, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಬಿಎಂಟಿಸಿ ಆಡಳಿತ ಮಂಡಳಿ ಈ ಭಾರಿ ಕ್ರಮ ಕೈಗೊಂಡಿದೆ.
ಹೌದು ಆಗಸ್ಟ್ 2ರಂದು ನೆಲಮಂಗಲ ಟೋಲ್ ಪ್ಲಾಜಾ ಬಳಿ ಮಾರ್ಗ ಸಂಖ್ಯೆ 258SD/1 (ಬಸ್ ಸಂಖ್ಯೆ: KA-57 F-1104) ಬಸ್‌ನಲ್ಲಿ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ಡಿಪೋ-43ಕ್ಕೆ ಸೇರಿದ ಕೃಷ್ಣಮೂರ್ತಿ ಎಂಬ ಕಂಡಕ್ಟರ್,
ಭಿಕ್ಷುಕನಿಗೆ ಒದ್ದಿರುವುದು ವಿಡಿಯೋದಲ್ಲಿದೆ. ಹಲ್ಲೆಗೊಳಗಾದವರು ಓಡಿಹೋದರೂ ನಿರ್ವಾಹಕರು ಬೆನ್ನಟ್ಟಿಕೊಂಡು ಹೋಗುವುದು ವಿಡಿಯೊದಲ್ಲಿ ಕಾಣುತ್ತದೆ. ಸ್ವಲ್ಪ ಸಮಯದ ನಂತರ, ಆ ಭಿಕ್ಷುಕ ರಸ್ತೆಯ ಮೇಲೆ ಕುಸಿದುಬಿದ್ದು ಅಲುಗಾಡದಂತೆ ಮಲಗಿದ್ದರೂ, ನಿರ್ವಾಹಕ ಸಹಾಯ ಮಾಡದೆ ಬಸ್ ಹತ್ತಿ ತೆರಳಿದ್ದಾರೆ.
ಇದೆಲ್ಲವನ್ನು ಸಾರ್ವಜನಿಕರೊಬ್ಬರು ಈ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆಹಿಡಿದು ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕರು ಬಿಎಂಟಿಸಿ ಸಿಬ್ಬಂದಿಯ ನಡೆಗೆ ತೀವ್ರ ಖಂಡನೆ ವ್ಯಕ್ತಪಡಿಸಿದ್ದರು.
ವಿಡಿಯೋ ಗಮನಿಸಿದ ಬಿಎಂಟಿಸಿ ಆಡಳಿತ ಮಂಡಳಿಯು ತಕ್ಷಣವೇ ಕಾರ್ಯಪ್ರವೃತ್ತರಾಗಿ, ವಿಭಾಗೀಯ ವಿಚಾರಣೆ ಮುಗಿಯುವವರೆಗೆ ಕಂಡಕ್ಟರ್ ಕೃಷ್ಣಮೂರ್ತಿಯವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದೆ.
"ಪ್ರಯಾಣಿಕರ ಗೌರವ, ಸುರಕ್ಷತೆ ಮತ್ತು ಹಕ್ಕುಗಳಿಗೆ ಧಕ್ಕೆ ತರುವಂತಹ ಯಾವುದೇ ಅಶಿಸ್ತು ಅಥವಾ ಅಸಭ್ಯ ವರ್ತನೆಯನ್ನು ಸಂಸ್ಥೆಯು ಸಹಿಸುವುದಿಲ್ಲ. ಸಿಸಿಟಿವಿ ದೃಶ್ಯಾವಳಿಗಳು, ಸಾಕ್ಷಿಗಳು ಹಾಗೂ ಸಿಬ್ಬಂದಿಯ ವಿಚಾರಣೆ ನಡೆಸಿ ಮುಂದಿನ ಕಾನೂನು ಹಾಗೂ ಇಲಾಖಾ ಕ್ರಮ ಜರುಗಿಸಲಾಗುವುದು" ಎಂದು ಬಿಎಂಟಿಸಿ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
PublicNext
05/08/2026 08:41 am