ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಅಧಿಕಾರ ಸಿಗಲಿಲ್ಲವೆಂದು ರಾಜೀನಾಮೆ ಬೆದರಿಕೆ ಒಡ್ಡುತ್ತಿರುವ ಅಸಮಾಧಾನಿತ ನಾಯಕರಿಗೆ ಸಚಿವ ಡಾ. ಹೆಚ್.ಸಿ. ಮಹಾದೇವಪ್ಪ ತಮ್ಮ 'X' (ಟ್ವಿಟರ್) ಖಾತೆಯ ಮೂಲಕ ಮಾರ್ಮಿಕವಾಗಿ ಪಕ್ಷನಿಷ್ಠೆಯ ಪಾಠ ಮಾಡಿದ್ದಾರೆ. "ಅಧಿಕಾರ ಕೊಟ್ಟಾಗ ಮಾತ್ರ ಪಕ್ಷ ಬೇಕು, ಅವಕಾಶ ಸಿಗಲಿಲ್ಲವೆಂದರೆ ರಾಜೀನಾಮೆ ನೀಡುತ್ತೇವೆ ಎನ್ನುವ ನಿಲುವು ಎಷ್ಟರಮಟ್ಟಿಗೆ ಸರಿ?" ಎಂದು ಅಸಮಾಧಾನಿತ ನಾಯಕರ ನಡೆಯ ವಿರುದ್ಧ ನೇರವಾಗಿ ಕಿಡಿಕಾರಿದ್ದಾರೆ.
"ನಮಗೆಲ್ಲರಿಗೂ ಅಧಿಕಾರಕ್ಕಿಂತ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನವೇ ಅತ್ಯಂತ ದೊಡ್ಡದು. ಪ್ರಜಾಪ್ರಭುತ್ವದ ಆಶಯಗಳಿಗೆ ಧ್ವನಿಯಾಗಲು ಅಥವಾ ಸಾರ್ವಜನಿಕ ಸೇವೆ ಮಾಡಲು ಕೈಯಲ್ಲಿ ಅಧಿಕಾರವೇ ಇರಬೇಕೆಂದೇನೂ ಇಲ್ಲ. ರಾಜಕೀಯ ಜೀವನದಲ್ಲಿ ಕೆಲವೊಮ್ಮೆ ಅವಕಾಶಗಳು ಸಿಗುತ್ತವೆ, ಇನ್ನು ಕೆಲವೊಮ್ಮೆ ಸಿಗುವುದಿಲ್ಲ. ಅದನ್ನು ಸಹನೆಯಿಂದ ಸ್ವೀಕರಿಸುವುದು ಪಕ್ಷದ ಶಿಸ್ತಿಗೆ ಗೌರವ ತರುತ್ತದೆ" ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
"ನಾವು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಕಾಪಾಡುವ ಆದ್ಯತೆಯನ್ನು ಮರೆತರೆ, ಬಂಡವಾಳಶಾಹಿಗಳು ಮತ್ತು ಸರ್ವಾಧಿಕಾರಿ ವ್ಯವಸ್ಥೆಯು ಸಂವಿಧಾನವನ್ನು ಹಾಳು ಮಾಡುವ ಅಪಾಯ ಹೆಚ್ಚಿರುತ್ತದೆ. ದೇಶದಲ್ಲಿ ಪ್ರಜಾಪ್ರಭುತ್ವವೇ ಉಳಿಯದಿದ್ದರೆ ಅಧಿಕಾರವಾಗಲೀ, ಹುದ್ದೆಯಾಗಲೀ ಯಾವುದಕ್ಕೂ ಬೆಲೆ ಇರುವುದಿಲ್ಲ. ಸಾರ್ವಜನಿಕರಿಗೆ ಹೆಚ್ಚಿನ ಕೆಲಸ ಮಾಡಿರುವ ತೃಪ್ತಿ ನನಗಿದೆ."
ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಎತ್ತಿಹಿಡಿಯುವುದೇ ಪ್ರತಿಯೊಬ್ಬ ಜನಪ್ರತಿನಿಧಿಯ ಮುಖ್ಯ ಕರ್ತವ್ಯವಾಗಬೇಕು ಎಂದು ಕರೆ ನೀಡಿರುವ ಮಹಾದೇವಪ್ಪ ಅವರ ಈ ಸೋಶಿಯಲ್ ಮೀಡಿಯಾ ಪೋಸ್ಟ್, ಈಗ ರಾಜ್ಯ ರಾಜಕೀಯ ಪಡಸಾಲೆಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
PublicNext
05/08/2026 05:37 pm
LOADING...