ನವದೆಹಲಿ: ದೇಶದಲ್ಲಿ 'ಪಿಎಂ ಸೂರ್ಯಘರ್: ಮಫ್ತ್ ಬಿಜ್ಲಿ ಯೋಜನೆ' ಆರಂಭವಾದ ಕೇವಲ ಎರಡೇ ವರ್ಷಗಳಲ್ಲಿ 50.06 ಲಕ್ಷಕ್ಕೂ ಹೆಚ್ಚು ಕುಟುಂಬಗಳು ಸೌರ ವಿದ್ಯುತ್‌ನ ಪ್ರಯೋಜನ ಪಡೆದಿದ್ದು, 19 ಲಕ್ಷ ಮನೆಗಳ ವಿದ್ಯುತ್ ಬಿಲ್ ಶೂನ್ಯವಾಗಿದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.
'ಪ್ರಧಾನ ಮಂತ್ರಿ ಸೂರ್ಯಘರ್: ಮಫ್ತ್ ಬಿಜ್ಲಿ ಯೋಜನೆ' ವಿಶ್ವದ ಅತಿದೊಡ್ಡ ಸೌರ ಮೇಲ್ಚಾವಣಿ (ರೂಫ್‌ಟಾಪ್ ಸೊಲಾರ್) ಅಭಿಯಾನವಾಗಿ ಗುರುತಿಸಿಕೊಂಡಿದ್ದು, ಯೋಜನೆ ಆರಂಭವಾದ ಎರಡೇ ವರ್ಷಗಳಲ್ಲಿ ಅಭೂತಪೂರ್ವ ಪ್ರಗತಿ ಸಾಧಿಸಿದೆ. ಪ್ರತಿದಿನ ಹೊಸ ಮೈಲಿಗಲ್ಲುಗಳನ್ನು ನಿರ್ಮಿಸುತ್ತಿದೆ ಎಂದು ಅವರು ಹೇಳಿದ್ದಾರೆ.
ಕಳೆದ ಹತ್ತು ವರ್ಷಗಳಲ್ಲಿ ಭಾರತದಲ್ಲಿ 7.94 ಲಕ್ಷ ಸೌರ ಮೇಲ್ಚಾವಣಿ ವ್ಯವಸ್ಥೆಗಳು ಸ್ಥಾಪನೆಯಾಗಿದ್ದರೆ, ಸೂರ್ಯಘರ್ ಯೋಜನೆ ಜಾರಿಯಾದ ಬಳಿಕ ಇದರ ವೇಗ ಗಮನಾರ್ಹವಾಗಿ ಹೆಚ್ಚಿದೆ. ₹75,021 ಕೋಟಿ ವೆಚ್ಚದಲ್ಲಿ ಅನುಷ್ಠಾನಗೊಳ್ಳುತ್ತಿರುವ ಈ ಯೋಜನೆ ಪ್ರಸ್ತುತ ಪ್ರತಿ ಆರು ದಿನಗಳಿಗೊಮ್ಮೆ 1 ಲಕ್ಷ ಮನೆಗಳನ್ನು ತಲುಪುತ್ತಿದೆ ಎಂದು ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ಈ ಯೋಜನೆ ಜಗತ್ತಿನಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಶುದ್ಧ ಇಂಧನ ಕಾರ್ಯಕ್ರಮಗಳಲ್ಲಿ ಒಂದಾಗಿದೆ. ಜುಲೈ ತಿಂಗಳೊಂದರಲ್ಲೇ 5.06 ಲಕ್ಷ ಕುಟುಂಬಗಳು ಇದರ ಪ್ರಯೋಜನ ಪಡೆದಿದ್ದು, ಯೋಜನೆ ಆರಂಭವಾದ ಬಳಿಕದ ಅತ್ಯಧಿಕ ಮಾಸಿಕ ಸಾಧನೆ ಇದಾಗಿದೆ ಎಂದು ಸಚಿವರು ಹೇಳಿದ್ದಾರೆ.
ದೇಶಾದ್ಯಂತ ಸುಮಾರು 19 ಲಕ್ಷ ಕುಟುಂಬಗಳು ಶೂನ್ಯ ವಿದ್ಯುತ್ ಬಿಲ್ ಪಡೆಯುತ್ತಿವೆ ಎಂದು ಅವರು ತಿಳಿಸಿದ್ದಾರೆ.
PublicNext
05/08/2026 09:58 pm
LOADING...