ಭೋಪಾಲ್: ಮಧ್ಯಪ್ರದೇಶದ ವಿದಿಶಾ ಜಿಲ್ಲೆಯಲ್ಲಿ ಶಾಲೆಗೆ ತೆರಳಲು ಮಕ್ಕಳು ಪ್ರತಿದಿನ ಜೀವದ ಹಂಗು ತೊಟ್ಟು ಅಪೂರ್ಣ ಸೇತುವೆಯ ಕಂಬಗಳ ಮೇಲೆ ಹಾರಿ ನದಿ ದಾಟುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವಿದಿಶಾ ಜಿಲ್ಲೆಯ ಪಹೋ ಪದಾರಿಯಾ ಗ್ರಾಮದ ಸ್ಟಾಪ್ ಅಣೆಕಟ್ಟಿನ ಬಳಿ ಈ ಘಟನೆ ನಡೆದಿದೆ. ವೈರಲ್ ವಿಡಿಯೋದಲ್ಲಿ ಶಾಲಾ ಬ್ಯಾಗ್ ಹೊತ್ತ ಮಕ್ಕಳು, ಕೆಳಗೆ ರಭಸವಾಗಿ ಹರಿಯುತ್ತಿರುವ ನೀರಿನ ನಡುವೆ ಅಪೂರ್ಣ ಸೇತುವೆಯ ಕಂಬಗಳಿಂದ ಕಂಬಗಳಿಗೆ ಜಿಗಿದು ಶಾಲೆಗೆ ತೆರಳುತ್ತಿರುವುದು ಕಾಣಿಸುತ್ತದೆ.
ಕಂಬಗಳ ನಡುವಿನ ಅಂತರ ಹೆಚ್ಚಿರುವುದರಿಂದ ಒಂದು ಸಣ್ಣ ತಪ್ಪಾದರೂ ಮಕ್ಕಳು ನೀರಿಗೆ ಬಿದ್ದು ದೊಡ್ಡ ಅನಾಹುತ ಸಂಭವಿಸುವ ಸಾಧ್ಯತೆ ಇದೆ. ಮಳೆಗಾಲದಲ್ಲಿ ನೀರಿನ ಹರಿವು ಮತ್ತಷ್ಟು ಹೆಚ್ಚಾಗುವುದರಿಂದ ಈ ಮಾರ್ಗ ಇನ್ನಷ್ಟು ಅಪಾಯಕಾರಿಯಾಗಿದೆ.
ಗ್ರಾಮಸ್ಥರ ಆರೋಪದಂತೆ, ಹಲವು ಬಾರಿ ಮನವಿ ಸಲ್ಲಿಸಿದ್ದರೂ ಸೇತುವೆ ನಿರ್ಮಾಣ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಸುರಕ್ಷಿತ ಪರ್ಯಾಯ ವ್ಯವಸ್ಥೆಯೂ ಕಲ್ಪಿಸಲಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಘಟನೆ ನಡೆದಿರುವ ವಿದಿಶಾ ಕ್ಷೇತ್ರವು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರ ಸಂಸದೀಯ ಕ್ಷೇತ್ರವಾಗಿದ್ದು, ವೈರಲ್ ಆಗಿರುವ ಈ ವಿಡಿಯೋ ಮೂಲಸೌಕರ್ಯದ ಸಮಸ್ಯೆಯನ್ನು ಮತ್ತೆ ಚರ್ಚೆಗೆ ತಂದಿದೆ.
PublicNext
04/08/2026 10:02 pm
LOADING...