ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಕುಂದಾನಗರಿಯಲ್ಲಿರುವ ಗೋವಾ ಬಸ್ ನಿಲ್ದಾಣ ಗಬ್ಬು ನಾತ!

ಬೆಳಗಾವಿ: ಮುರಿದು ಬಿದ್ದಿರುವ ಕುರ್ಚಿಗಳು, ಎಲ್ಲಿ ನೋಡಿದರೂ ಅಲ್ಲಿ ಕಸ ಕಸ... ಇನ್ನೊಂದು ಕಡೆ ಮದ್ಯದ ಬಾಟಲಿಗಳ ದರ್ಬಾರ್, ಮತ್ತೊಂದೆಡೆ ಶಾಲಾ ಮಕ್ಕಳ ಪರದಾಟ, ಅಸಹಾಯಕತೆ.

ಹೌದು.‌.. ಈ ದೃಶ್ಯ ಕಂಡು ಬಂದಿದ್ದು, ಬೆಳಗಾವಿ ನಗರದ ರೈಲ್ವೇ ನಿಲ್ದಾಣದ ಮುಂದೆ ಇರುವ ಬಸ್ ನಿಲ್ದಾಣದಲ್ಲಿ. ಸಾಮಾನ್ಯವಾಗಿ ಈ ಬಸ್ ನಿಲ್ದಾಣವನ್ನು ಗೋವಾ ಬಸ್ ನಿಲ್ದಾಣ ಎಂದು ಇಲ್ಲಿನ ಜನ ಕರೆಯುತ್ತಾರೆ. ಯಾಕಂದ್ರೆ ಗೋವಾ, ಕಾರವಾರ ಭಾಗಕ್ಕೆ ಈ ಬಸ್ ನಿಲ್ದಾಣದಿಂದಲೇ ಹೆಚ್ಚು ಬಸ್‌ಗಳು ಕಾರ್ಯಾಚರಣೆ ನಡೆಸುತ್ತಿವೆ. ಆದರೆ, ಈ ಬಸ್ ನಿಲ್ದಾಣದ ಸದ್ಯದ ಪರಿಸ್ಥಿತಿ ಅತಿ ಗಂಭೀರ ಸ್ಥಿತಿಗೆ ಬಂದು ತಲುಪಿದೆ.

ನಿರ್ವಹಣೆ ಇಲ್ಲದೆ ಈ ಬಸ್ ನಿಲ್ದಾಣದಲ್ಲಿ ಎಲ್ಲೆಂದರಲ್ಲಿ ಕಸ ಡಂಪ್ ಮಾಡಲಾಗಿದೆ. ಬಸ್ ನಿಲ್ದಾಣದ ಅಕ್ಕ ಪಕ್ಕ ಇರುವ ಅಂಗಡಿಗಳ ಕಸ ನಿಲ್ದಾಣದ ಆವರಣದಲ್ಲೇ ಎಸೆಯಲಾಗುತ್ತಿದೆ.

ರಾತ್ರಿಯಾದರೆ ಸಾಕು, ಕುಡುಕರು ತಮ್ಮ ತಮ್ಮ ಆಟ ಶುರು ಮಾಡ್ತಾರೆ. ಬಸ್ ನಿಲ್ದಾಣದಲ್ಲೇ ಕುಡಿದು ಮದ್ಯದ ಬಾಟಲಿಗಳನ್ನು ಎಸೆದು ಹೋಗುತ್ತಿದ್ದಾರೆ. ಬಸ್ ತಂಗು ದಾಣದಲ್ಲಿ ಇರುವ ಬಹುತೇಕ ಕುರ್ಚಿಗಳು ಹಾಳಾಗಿವೆ. ನಿರ್ವಹಣೆ ಇಲ್ಲದೆ ವಿದ್ಯಾರ್ಥಿಗಳು, ಪ್ರಯಾಣಿಕರು ಮುಚ್ಚಿ ಕುಳಿತುಕೊಳ್ಳುವ ಸ್ಥಿತಿ ಉಂಟಾಗಿದೆ.

ಬೆಳಗಾವಿ ದಂಡುಮಂಡಳಿ ಅಡಿಯಲ್ಲಿ ಈ ಪ್ರದೇಶ ಬರುವುದರಿಂದ ಬಸ್ ನಿಲ್ದಾಣದ ನಿರ್ವಹಣೆಯನ್ನು ದಂಡು ಮಂಡಳಿ ಮಾಡಬೇಕು. ಆದರೆ, ಅಲ್ಲಿಯ ಅಧಿಕಾರಿಗಳು ಮಾತ್ರ ನಮಗೂ ಅದಕ್ಕೂ ಸಂಬಂಧವೇ ಇಲ್ಲ ಅನ್ನೋ ರೀತಿಯಲ್ಲಿ ಈ ಬಸ್ ನಿಲ್ದಾಣದಿಂದ ಅಂತರ ಕಾಯ್ದು ಕೊಂಡಿದ್ದಾರೆ. ಸಂಬಂಧಿಸಿದ ಶಾಸಕರು ಹಾಗೂ ಸಂಸದರಿಗೂ ಈ ವಿಷಯ ಗೊತ್ತಿದ್ದರೂ ಮೌನ ವಹಿಸಿರುವುದಕ್ಕೆ ವಿದ್ಯಾರ್ಥಿಗಳು ಆಕ್ರೋಶ ಹೊರ ಹಾಕಿದ್ದಾರೆ.

ಒಟ್ಟಿನಲ್ಲಿ ಬೆಳಗಾವಿ ನಗರ ವೇಗವಾಗಿ ಬೆಳೆಯುತ್ತಿದ್ದರೂ ಸ್ವಚ್ಛತೆಯ ನಿರ್ವಹಣೆ ವಿಷಯಗಳಲ್ಲಿ ತುಂಬಾ ಹಿಂದೆ ಉಳಿದುಕೊಳ್ಳುತ್ತಿದೆ. ಹಾಗಾಗಿ ಈ ಬಸ್ ನಿಲ್ದಾಣ ಈಗಲಾದರೂ ನಿರ್ವಹಣೆ ಆಗುತ್ತಾ ಎಂದು ಕಾದು ನೋಡಬೇಕು.

Edited By :
PublicNext

PublicNext

06/08/2026 08:53 am

Cinque Terre

8.71 K

Cinque Terre

0