ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸವದತ್ತಿ: ಜಿಲ್ಲಾಧಿಕಾರಿ ಭರವಸೆ ಈಡೇರಿಲ್ಲ; ಆಕ್ರೋಶಿತ ರೈತರಿಂದ ಸವದತ್ತಿ ಹೆದ್ದಾರಿ ಬಂದ್

ಸವದತ್ತಿ : ಬೆಳಗಾವಿ ಜಿಲ್ಲೆಯ ಸವದತ್ತಿ ನಗರದ ಸಮೀಪ ಇಂದು ನೂರಾರು ರೈತರು ಸಿಂಧನೂರು–ಹೆಮ್ಮಡಗಾ ರಾಜ್ಯ ಹೆದ್ದಾರಿಯನ್ನು ತಡೆದು ಭಾರಿ ಪ್ರತಿಭಟನೆ ನಡೆಸಿದರು.

ಬೆಳಗ್ಗೆ 8 ಗಂಟೆಯಿಂದಲೇ ಸವದತ್ತಿ–ವಿಜಯಪುರ–ಚಿಕ್ಕೋಡಿ ರಾಜ್ಯ ಹೆದ್ದಾರಿಯನ್ನು ಬಂದ್ ಮಾಡಿ ನವಲಗುಂದ, ನರಗುಂದ ಹಾಗೂ ಸವದತ್ತಿ ತಾಲೂಕಿನ ರೈತರು ರಸ್ತೆ ತಡೆ ನಡೆಸಿದರು. ಮಲಪ್ರಭಾ ನದಿಯ ನೀರನ್ನು ಕಾಲುವೆಗೆ ಹರಿಸಿ, ಜಾನುವಾರುಗಳಿಗೆ ಮೇವು ಹಾಗೂ ಕುಡಿಯುವ ನೀರಿನ ಸಮಸ್ಯೆ ನಿವಾರಿಸಬೇಕು ಎಂದು ರೈತರು ಸರ್ಕಾರವನ್ನು ಆಗ್ರಹಿಸಿದರು. ಕಳೆದ ಹತ್ತು ದಿನಗಳ ಹಿಂದೆ 2 ಟಿಎಂಸಿ ನೀರು ಬಿಡುಗಡೆ ಮಾಡುವುದಾಗಿ ಜಿಲ್ಲಾಧಿಕಾರಿಗಳು ಭರವಸೆ ನೀಡಿದ್ದರೂ, ಇದುವರೆಗೆ ಯಾವುದೇ ಕ್ರಮ ಕೈಗೊಳ್ಳದಿರುವುದಕ್ಕೆ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಕಾಲುವೆಗೆ ನೀರು ಹರಿಸುವವರೆಗೆ ನಮ್ಮ ಪ್ರತಿಭಟನೆ ನಿಲ್ಲುವುದಿಲ್ಲ ಎಂದು ರೈತರು ಎಚ್ಚರಿಕೆ ನೀಡಿದರು.

ಪ್ರತಿಭಟನೆ ಸ್ಥಳಕ್ಕೆ ಸವದತ್ತಿ ತಹಶೀಲ್ದಾರ್ ಮಲ್ಲಿಕಾರ್ಜುನ ಹೆಗ್ಗಣ್ಣವರ ಹಾಗೂ ನೀರಾವರಿ ಇಲಾಖೆಯ ಅಧಿಕಾರಿ ಮನೋಹರ ಬಿಸ್ನಾಳ ಭೇಟಿ ನೀಡಿ ರೈತರ ಮನವೊಲಿಸಲು ಪ್ರಯತ್ನಿಸಿದರು. ಆದರೆ, ಅಧಿಕಾರಿಗಳ ಮನವಿಗೆ ರೈತರು ಒಪ್ಪದೆ ತಮ್ಮ ಪ್ರತಿಭಟನೆಯನ್ನು ಮುಂದುವರಿಸಿದರು. ಈ ಪ್ರತಿಭಟನೆಯಿಂದ ರಾಜ್ಯ ಹೆದ್ದಾರಿಯಲ್ಲಿ ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡು ಸಂಚಾರ ದಟ್ಟಣೆ ಉಂಟಾಯಿತು.

ವರದಿ: ಮಲ್ಲೇಶ ಕುಂಬಾರ, ಪಬ್ಲಿಕ್ ನೆಕ್ಸ್ಟ್, ಸವದತ್ತಿ

Edited By :
PublicNext

PublicNext

06/08/2026 07:32 pm

Cinque Terre

4.24 K

Cinque Terre

0