ಶಿವಮೊಗ್ಗ: ಇತ್ತೀಚೆಗೆ ಸುರಿದ ಭಾರೀ ಮಳೆಗೆ ಹೊಸನಗರ ತಾಲೂಕಿನ ನಗರ ಹೋಬಳಿ ಅಂಡಗದೋಂದೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ದೊಡ್ಡಿನಗದ್ದೆ ಗ್ರಾಮದ ವಾಸಿ ವೀರಪ್ಪಗೌಡ ಅವರ ಮನೆಯ ಪಕ್ಕದ ಧರೆ ಕುಸಿದಿದೆ. ಇದು ಹೀಗೆಯೇ ಮುಂದುವರಿದರೆ ಮನೆಗೆ ಧಕ್ಕೆ ಉಂಟಾಗಲಿದ್ದು, ದೊಡ್ಡ ಅವಘಡಕ್ಕೆ ನಾಂದಿ ಹಾಡಬಹುದು ಎಂಬ ಸುದ್ದಿ ತಿಳಿದು ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು.
ಈ ವೇಳೆ ಮಾತನಾಡಿದ ಅವರು, "ಈ ಘಟನೆಯ ಕುರಿತು ಈಗಾಗಲೇ ಇತ್ತೀಚಿನ ಹೊಸನಗರ ಕೆಡಿಪಿ ಸಭೆಯಲ್ಲಿ ಚರ್ಚಿಸಿದ್ದೆ. ನಿವಾಸಿಗಳನ್ನು ಕೂಡಲೇ ಪಕ್ಕದ ರ‍್ಯಾವೆ ಗ್ರಾಮಕ್ಕೆ ಸ್ಥಳಾಂತರಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೆ. ನಿಜಕ್ಕೂ ಈ ಮನೆ ಅಪಾಯದ ಸ್ಥಿತಿಯಲ್ಲಿದೆ," ಎಂದರು. ಅಲ್ಲದೆ, ಮನೆಯ ಮಾಲೀಕರಿಗೆ ಬೇರೆ ಕಡೆಯಲ್ಲಿ ನೂತನ ಮನೆ ನಿರ್ಮಿಸಿಕೊಳ್ಳಲು ಸರ್ಕಾರದ ವತಿಯಿಂದ ಅಗತ್ಯ ಸಹಕಾರ ನೀಡುವ ಭರವಸೆ ನೀಡಿದರು.
ಇದೇ ವೇಳೆ, "ಈಗಾಗಲೇ ಪಿಎಂಜಿಎಸ್‌ವೈ ಯೋಜನೆಯಡಿ ಈ ಭಾಗದ ನಾಲ್ಕು ಕಿ.ಮೀ. ನೂತನ ರಸ್ತೆ ನಿರ್ಮಾಣಕ್ಕೆ ₹40 ಲಕ್ಷ ಅನುದಾನ ಬಿಡುಗಡೆಯಾಗಿದೆ. ಶೀಘ್ರದಲ್ಲೇ ಕಾಮಗಾರಿ ಆರಂಭಗೊಳ್ಳಲಿದೆ. ಅಲ್ಲದೆ ₹1 ಕೋಟಿ ಅನುದಾನದಲ್ಲಿ ಸೂಲದಮಕ್ಕಿ ನೂತನ ಸೇತುವೆ ನಿರ್ಮಾಣ ಕಾರ್ಯ ನಡೆಯಲಿದ್ದು, ಇದರಿಂದ ಯಡೂರು ಸಂಪರ್ಕಕ್ಕೆ ಅನುಕೂಲವಾಗಲಿದೆ," ಎಂದು ತಿಳಿಸಿದರು. ಮುಂಬರುವ ದಿನಗಳಲ್ಲಿ ಈ ಭಾಗಕ್ಕೆ ಹೆಚ್ಚಿನ ಅನುದಾನ ಮೀಸಲಿಡುವ ಮೂಲಕ ಹಲವು ಜನಪರ ಕಾರ್ಯಕ್ರಮಗಳನ್ನು ಕೈಗೊಳ್ಳುವ ಇಂಗಿತ ವ್ಯಕ್ತಪಡಿಸಿದ ಅವರು, ಇಂದಿನ ರಾಜ್ಯ ಸರ್ಕಾರದಲ್ಲಿ ಅನುದಾನದ ಕೊರತೆಯಿಂದ ಅಭಿವೃದ್ಧಿ ಕುಂಠಿತವಾಗುತ್ತಿದೆ ಎಂದರು.
PublicNext
06/08/2026 02:20 pm
LOADING...