ನವದೆಹಲಿ : ಯುವಜನರ ಸಮಸ್ಯೆಗಳು, ಉದ್ಯೋಗ ಸೃಷ್ಟಿ ಹಾಗೂ ಶಿಕ್ಷಣ ಕ್ಷೇತ್ರದಲ್ಲಿನ ಆಮೂಲಾಗ್ರ ಬದಲಾವಣೆಗಳನ್ನು ಮುನ್ನೆಲೆಗೆ ತರುವ ಉದ್ದೇಶದಿಂದ ‘ಕಾಕ್ರೋಚ್ ಜನತಾ ಪಾರ್ಟಿ’ ಸಂಸ್ಥಾಪಕ ಅಭಿಜೀತ್ ದೀಪ್ಕೆ ಮುಂಬರುವ ಸೆಪ್ಟೆಂಬರ್ ತಿಂಗಳಿನಿಂದ ‘ಕ್ಯಾ ಬೋಲ್ತಿ ಪಬ್ಲಿಕ್’ ಎಂಬ ಬೃಹತ್ ರಾಷ್ಟ್ರವ್ಯಾಪಿ ಅಭಿಯಾನವನ್ನು ಘೋಷಿಸಿದ್ದಾರೆ. ಕಳೆದ ತಿಂಗಳು ನವದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿ ಹೋರಾಟದ ಮೂಲಕ ದೇಶದ ಗಮನ ಸೆಳೆದಿದ್ದ ದೀಪ್ಕೆ, ಪ್ರಸ್ತುತ ಸಿಜೆಪಿಯನ್ನು ರಾಜಕೀಯ ಪಕ್ಷವಾಗಿ ಪರಿವರ್ತಿಸದೆ ಸರ್ಕಾರದ ಮೇಲೆ ಒತ್ತಡ ಹೇರುವ ಗುಂಪಾಗಿ ಮುಂದುವರಿಸುವುದಾಗಿ ಸ್ಪಷ್ಟಪಡಿಸಿದ್ದಾರೆ.
ಪಕ್ಷದ ಎರಡು ದಿನಗಳ ಸುದೀರ್ಘ ಚಿಂತನ ಮಂಥನ ಸಭೆಯ ಬಳಿಕ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಅಭಿಜೀತ್, ದೇಶದ ಶೇಕಡಾ 65 ರಷ್ಟು ಜನಾಂಗ 35 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯುವಕರಾಗಿದ್ದರೂ, ಮುಖ್ಯವಾಹಿನಿಯ ರಾಜಕೀಯದಲ್ಲಿ ಅವರ ಧ್ವನಿಗೆ ಬೆಲೆ ಸಿಗುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು. ಈ ‘ಕ್ಯಾ ಬೋಲ್ತಿ ಪಬ್ಲಿಕ್’ ಜನಾಭಿಪ್ರಾಯ ಸಂಗ್ರಹ ಅಭಿಯಾನದ ಮೂಲಕ ದೇಶಾದ್ಯಂತ ಸಂಚರಿಸಿ ಯುವಜನರ ಆಕಾಂಕ್ಷೆ, ನಿರೀಕ್ಷೆ ಹಾಗೂ ಅವರು ಎದುರಿಸುತ್ತಿರುವ ನೈಜ ಸಮಸ್ಯೆಗಳನ್ನು ಹತ್ತಿರದಿಂದ ಆಲಿಸಲಾಗುವುದು ಎಂದು ಅವರು ತಿಳಿಸಿದರು.
ದೇಶದಲ್ಲಿ ನಿರುದ್ಯೋಗ ಮತ್ತು ಶಿಕ್ಷಣದ ವೆಚ್ಚ ಹೆಚ್ಚುತ್ತಿರುವುದರ ಕುರಿತು ವಾಗ್ದಾಳಿ ನಡೆಸಿದ ದೀಪ್ಕೆ, ಡಿಗ್ರಿ ಮುಗಿಸಿದ ಶೇ. 80 ರಷ್ಟು ಯುವಕರು ಇಂದು ಸೂಕ್ತ ಕೆಲಸವಿಲ್ಲದೆ ಪರದಾಡುತ್ತಿದ್ದಾರೆ. ಬಲವಂತವಾಗಿ ಡೆಲಿವರಿ ಬಾಯ್ ಆಗುವುದು ಯಾವುದೇ ಯುವಕನ ಕನಸಾಗಿರುವುದಿಲ್ಲ ಎಂದು ಅಸಮಾಧಾನ ಹೊರಹಾಕಿದರು. ಶಿಕ್ಷಣವನ್ನು ಸಾಮಾನ್ಯ ಜನರಿಗೆ ಕೈಗೆಟುಕುವಂತೆ ಮಾಡುವುದು ಹಾಗೂ ನಿರುದ್ಯೋಗವನ್ನು ರಾಷ್ಟ್ರೀಯ ವಿಷಯವನ್ನಾಗಿ ಮಾಡಿ ಸರ್ಕಾರದ ಗಮನ ಸೆಳೆಯುವುದು ಈ ಅಭಿಯಾನದ ಪ್ರಮುಖ ಆದ್ಯತೆಯಾಗಿದೆ ಎಂದು ಅವರು ಪ್ರತಿಪಾದಿಸಿದರು.
PublicNext
06/08/2026 04:38 pm