ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೀದರ್ : BSSK ಸಕ್ಕರೆ ಕಾರ್ಖಾನೆ ಹರಾಜು ಬೇಡ..ಗುತ್ತಿಗೆ ನೀಡಿ ಪುನಶ್ಚೇತನಗೊಳಿಸಲು ಶಕುಂತಲಾ ಬೆಲ್ದಾಳೆ ಆಗ್ರಹ

ಬೀದರ್ : ಬೀದರ್ ಸಹಕಾರ ಸಕ್ಕರೆ ಕಾರ್ಖಾನೆ (BSSK)ಯನ್ನು ಯಾವುದೇ ಕಾರಣಕ್ಕೂ ಹರಾಜು ಹಾಕಬಾರದು. ಬದಲಾಗಿ ಖಾಸಗಿಯವರಿಗೆ ಗುತ್ತಿಗೆ ನೀಡಿ ಪುನಶ್ಚೇತನಗೊಳಿಸಿ ರೈತರು ಹಾಗೂ ಕಾರ್ಮಿಕರ ಹಿತ ಕಾಪಾಡಬೇಕು ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕಿ ಶಕುಂತಲಾ ಕೆ. ಬೆಲ್ದಾಳೆ ಆಗ್ರಹಿಸಿದ್ದಾರೆ.

ಈ ಕುರಿತು ಡಿಸಿಸಿ ಬ್ಯಾಂಕ್ ಬೀದರ್ ಅಧ್ಯಕ್ಷ ಅಮರಕುಮಾರ ಖಂಡ್ರೆ ಅವರಿಗೆ ಮನವಿ ಸಲ್ಲಿಸಿರುವ ಅವರು, ಹಳೇಕೇಡ್ ಸಮೀಪದ BSSK ಕಾರ್ಖಾನೆ ಜಿಲ್ಲೆಯ ರೈತರ ಜೀವನಾಡಿಯಾಗಿದೆ ಎಂದು ಹೇಳಿದ್ದಾರೆ.

1969ರಲ್ಲಿ ಸ್ಥಾಪನೆಯಾದ ಈ ಸಹಕಾರ ಸಕ್ಕರೆ ಕಾರ್ಖಾನೆ ಡಿಸಿಸಿ ಬ್ಯಾಂಕ್‌ಗೆ ಸಾಲದ ಬಾಕಿ ಉಳಿಸಿಕೊಂಡಿದೆ. ಕಳೆದ ಹಲವು ವರ್ಷಗಳಿಂದ ಸಾಲ ವಸೂಲಿ ಆಗದಿರುವುದರಿಂದ ಬ್ಯಾಂಕ್‌ನ ಆರ್ಥಿಕ ವ್ಯವಹಾರದ ಮೇಲೂ ಪರಿಣಾಮ ಬೀರಿದೆ. ಹೀಗಾಗಿ ಸಾಲ ವಸೂಲಿ ಮಾಡುವುದರ ಜೊತೆಗೆ ಕಾರ್ಖಾನೆಯನ್ನು ಪುನಶ್ಚೇತನಗೊಳಿಸಿ ಮತ್ತೆ ಕಾರ್ಯಾರಂಭ ಮಾಡುವುದು ಅತ್ಯಂತ ಅಗತ್ಯ ಎಂದು ಅವರು ತಿಳಿಸಿದ್ದಾರೆ.

ಈಗಾಗಲೇ 2024ರ ಡಿಸೆಂಬರ್ 18ರಂದು ನಡೆದ ಸರ್ಕಾರದ ಮಟ್ಟದ ಸಭೆಯಲ್ಲಿ BSSK ಕಾರ್ಖಾನೆಯನ್ನು ಖಾಸಗಿಯವರಿಗೆ LROT ಆಧಾರದ ಮೇಲೆ ಗುತ್ತಿಗೆ ನೀಡುವ ಕುರಿತು ನಿರ್ಧಾರ ಕೈಗೊಳ್ಳಲಾಗಿದೆ. ಅಲ್ಲದೆ, 2026ರ ಆಗಸ್ಟ್ 27ರಂದು ವಾಣಿಜ್ಯ ಇಲಾಖೆಯ ಕಾರ್ಯದರ್ಶಿಗಳು ಡಿಸಿಸಿ ಬ್ಯಾಂಕ್ ಸಿಇಒ ಅವರಿಗೆ ಬರೆದ ಪತ್ರದಲ್ಲೂ ಗುತ್ತಿಗೆ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ ಎಂದು ಉಲ್ಲೇಖಿಸಲಾಗಿದೆ ಎಂದು ಶಕುಂತಲಾ ಬೆಲ್ದಾಳೆ ಹೇಳಿದ್ದಾರೆ.

ಆದ್ದರಿಂದ ಸರ್ಕಾರದ ಈ ಕ್ರಮಕ್ಕೆ ಡಿಸಿಸಿ ಬ್ಯಾಂಕ್ ಸಂಪೂರ್ಣ ಸಹಕಾರ ನೀಡಬೇಕು. ಬ್ಯಾಂಕ್ ಅಧ್ಯಕ್ಷ ಅಮರಕುಮಾರ ಖಂಡ್ರೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಸರ್ಕಾರದ ಮಟ್ಟದಲ್ಲಿ ಮಧ್ಯಪ್ರವೇಶಿಸಿ, ಕಾರ್ಖಾನೆಯನ್ನು ಖಾಸಗಿಯವರಿಗೆ ಗುತ್ತಿಗೆ ನೀಡುವ ಪ್ರಕ್ರಿಯೆಯನ್ನು ಶೀಘ್ರ ಅಂತಿಮಗೊಳಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಕಾರ್ಖಾನೆಯನ್ನು ಗುತ್ತಿಗೆ ನೀಡಿ ಪುನಶ್ಚೇತನಗೊಳಿಸುವುದರಿಂದ ಒಂದೆಡೆ ರೈತರು ಮತ್ತು ಕಾರ್ಮಿಕರ ಹಿತ ಕಾಪಾಡಬಹುದು. ಮತ್ತೊಂದೆಡೆ ಡಿಸಿಸಿ ಬ್ಯಾಂಕ್‌ನ ಬಾಕಿ ಸಾಲವನ್ನೂ ವಸೂಲಿ ಮಾಡಬಹುದು. ಇದರಿಂದ ಎಲ್ಲಾ ವರ್ಗದವರಿಗೂ ಅನುಕೂಲವಾಗಲಿದೆ ಎಂದು ಅವರು ತಿಳಿಸಿದ್ದಾರೆ.

BSSK ಕಾರ್ಖಾನೆಯನ್ನು ಹರಾಜು ಹಾಕುವ ಕ್ರಮಕ್ಕೆ ರೈತರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ರೈತರ ಹಿತ ಕಾಪಾಡುವುದು ರೈತಪರ ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿಯ ಜವಾಬ್ದಾರಿಯಾಗಿದೆ ಎಂದು ಶಕುಂತಲಾ ಬೆಲ್ದಾಳೆ ಹೇಳಿದ್ದಾರೆ.

ಕಾರ್ಖಾನೆಯನ್ನು ಮತ್ತೆ ಹರಾಜು ಹಾಕಲು ಮುಂದಾದರೆ ರೈತರು ಮತ್ತು ಕಾರ್ಮಿಕರ ಪರವಾಗಿ ತೀವ್ರ ವಿರೋಧ ವ್ಯಕ್ತಪಡಿಸಲಾಗುವುದು. ಯಾವುದೇ ಕಾರಣಕ್ಕೂ ಹರಾಜಿಗೆ ಒಪ್ಪುವುದಿಲ್ಲ. ಅಗತ್ಯವಿದ್ದರೆ ರೈತರ ಹಿತಕ್ಕಾಗಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೂ ರಾಜೀನಾಮೆ ನೀಡಲು ಸಿದ್ಧ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

Edited By :
PublicNext

PublicNext

04/09/2026 04:20 pm

Cinque Terre

3.07 K

Cinque Terre

0

ಸಂಬಂಧಿತ ಸುದ್ದಿ