ಬೀದರ್: ರಾಜ್ಯದ ಪ್ರತಿ ತಾಲೂಕಿನ ಪ್ರತಿ ಗ್ರಾಮದ ಜನರ ಮನೆ ಬಾಗಿಲಿಗೆ ಇಡೀ ಜಿಲ್ಲಾಡಳಿತವೇ ತೆರಳಿ ಅಹವಾಲು ಆಲಿಸಿ ಸ್ಥಳದಲ್ಲೇ ಪರಿಹಾರ ನೀಡುವ ಉದ್ದೇಶದಿಂದ ಪ್ರಜಾಸೇವಾ ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ರಹೀಂ ಖಾನ್ ಹೇಳಿದರು.
ಬೀದರ್ ತಾಲೂಕಿನ ಜನವಾಡದಲ್ಲಿ ಪ್ರಜಾಸೇವಾ ಆಂದೋಲನ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರದ ಎಲ್ಲ ಯೋಜನೆಗಳು ಗ್ರಾಮಸ್ಥರ ಮನೆ ತಲುಪಬೇಕು. ಗ್ರಾಮಸ್ಥರು ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಲು 40ಕ್ಕೂ ಹೆಚ್ಚು ಇಲಾಖೆಗಳ ಅಧಿಕಾರಿಗಳು ಗ್ರಾಮಕ್ಕೆ ಬಂದಿದ್ದಾರೆ. ಸ್ಥಳದಲ್ಲೇ ಇತ್ಯರ್ಥಪಡಿಸಬಹುದಾದ ಅಹವಾಲುಗಳನ್ನು ತಕ್ಷಣ ಬಗೆಹರಿಸಲಾಗುವುದು. 15 ದಿನದೊಳಗೆ ಅಧಿಕಾರಿಗಳು ವರದಿ ಸಲ್ಲಿಸಬೇಕು, ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.
ಜಿಲ್ಲಾ ಪಂಚಾಯತ್ ಸಿಇಒ ಗಿಟ್ಟೆ ಮಾಧವ ವಿಠ್ಠಲರಾವ್ ಮಾತನಾಡಿ, ಇದು ಸರ್ಕಾರದ ಮಹತ್ವಾಕಾಂಕ್ಷಿ ಕಾರ್ಯಕ್ರಮ. ಜಿಲ್ಲೆಯಲ್ಲಿ ಬರದ ಛಾಯೆ ಇದ್ದು, ಸೆ. 4ರಂದು 38 ಸಾವಿರ ಉದ್ಯೋಗ ಸೃಷ್ಟಿಸಲಾಗಿದೆ. ಜನರು ಗುಳೆ ಹೋಗದೆ NREGA ಯೋಜನೆಯಡಿ ಗ್ರಾಮದಲ್ಲೇ ಕೆಲಸ ಮಾಡಬೇಕು ಎಂದರು.
ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಮಾತನಾಡಿ, ರಸ್ತೆ, ಚರಂಡಿ, ಹೊಲಗಳಿಗೆ ರಸ್ತೆ, ಸರ್ವೆ ಸಮಸ್ಯೆಗಳನ್ನು 15 ದಿನದಲ್ಲಿ ಇತ್ಯರ್ಥಪಡಿಸುವಂತೆ ಸೂಚಿಸಿದರು.
ಈ ವೇಳೆ ಸಿಎಂ ಡಿ.ಕೆ. ಶಿವಕುಮಾರ್ ಅವರ ಪ್ರಜಾಸೇವಾ ಕಾರ್ಯಕ್ರಮದ ನೇರಪ್ರಸಾರ ವೀಕ್ಷಿಸಲಾಯಿತು. ಕಾರ್ಯಕ್ರಮದಲ್ಲಿ 40 ಇಲಾಖೆಗಳು ಮಳಿಗೆ ತೆರೆದಿದ್ದು, 400 ಅಹವಾಲುಗಳು ಸ್ವೀಕೃತವಾದವು.
ಜಿಲ್ಲೆಯ ಔರಾದ್ ತಾಲೂಕಿನ ಸಂತಪುರ, ಚಿಟಗುಪ್ಪದ ಬೆಳಮಖೇಡ, ಬೀದರ್‌ನ ಜನವಾಡ, ಹುಮನಾಬಾದ್‌ನ ಹಳ್ಳಿಖೇಡ, ಬಸವಕಲ್ಯಾಣದ ಮುಡಬಿ, ಕಮಲನಗರ ಮತ್ತು ಹುಲಸೂರು ಹೋಬಳಿಗಳಲ್ಲಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಭಾಲ್ಕಿಯ ಮೆಹಕರ ಗ್ರಾಮದಲ್ಲಿ ಸೆ. 8ರಂದು ಸಚಿವ ಈಶ್ವರ ಖಂಡ್ರೆ ಅವರಿಂದ ಆಂದೋಲನ ನಡೆಯಲಿದೆ.
PublicNext
05/09/2026 06:54 pm
LOADING...