ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊಪ್ಪಳ: ಗಂಗಾವತಿಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

ಕೊಪ್ಪಳ: ಗ್ರಾಮೀಣ ಭಾಗದ ಮಹಿಳೆಯರು ತಮ್ಮ ದೈನಂದಿನ ಕೆಲಸಗಳ ನಡುವೆ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸದೆ, ಆರಂಭಿಕ ಹಂತದಲ್ಲಿಯೇ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಗಂಗಾವತಿ ತಾಲೂಕಿನ ಯೋಜನಾಧಿಕಾರಿ ಶಾಂತ ನಾಯಕ್ ಕರೆ ನೀಡಿದರು.

ಗಂಗಾವತಿ ತಾಲೂಕಿನ ಈಶ್ವರ ನಗರ ವಲಯದ ವಿನಾಯಕ ನಗರ ಕಾರ್ಯಕ್ಷೇತ್ರದಲ್ಲಿ ಜ್ಞಾನವಿಕಾಸ ಕಾರ್ಯಕ್ರಮದಡಿ ಸರ್ಕಾರಿ ಆಯುರ್ವೇದ ಆಸ್ಪತ್ರೆ, ಗಂಗಾವತಿ ಹಾಗೂ ಮಾರುತಿ ಕಣ್ಣಿನ ಆಸ್ಪತ್ರೆ, ಗಂಗಾವತಿ ಇದರ ಸಹಯೋಗದಲ್ಲಿ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಆರೋಗ್ಯಕ್ಕಿಂತ ದೊಡ್ಡ ಸಂಪತ್ತು ಮತ್ತೊಂದಿಲ್ಲ. ಗ್ರಾಮೀಣ ಭಾಗದ ಮಹಿಳೆಯರು ತಮ್ಮ ದೈನಂದಿನ ಕೆಲಸಗಳ ಒತ್ತಡದಲ್ಲಿ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸುತ್ತಿಲ್ಲ. ಹಲವು ಆರೋಗ್ಯ ಸಮಸ್ಯೆಗಳನ್ನು ಆರಂಭದಲ್ಲೇ ವೈದ್ಯರೊಂದಿಗೆ ಮುಕ್ತವಾಗಿ ಹಂಚಿಕೊಳ್ಳದೆ, ಸಮಸ್ಯೆ ಗಂಭೀರವಾದ ಬಳಿಕ ಚಿಕಿತ್ಸೆಗೆ ಮುಂದಾಗುತ್ತಿರುವುದರಿಂದ ಹೆಚ್ಚಿನ ಖರ್ಚು ಹಾಗೂ ತೊಂದರೆ ಎದುರಿಸುವಂತಾಗಿದೆ ಎಂದರು.

ಶಿಬಿರದಲ್ಲಿ ರಕ್ತದೊತ್ತಡ, ಮಧುಮೇಹ, ಕೀಲು-ಮೂಳೆ ಸಮಸ್ಯೆಗಳು, ಕಣ್ಣಿನ ತಪಾಸಣೆ, ಸಾಮಾನ್ಯ ಆರೋಗ್ಯ ತಪಾಸಣೆ ಹಾಗೂ ಮಕ್ಕಳ ಆರೋಗ್ಯಕ್ಕೆ ಸಂಬಂಧಿಸಿದ ತಪಾಸಣೆ ನಡೆಸಲಾಯಿತು. ಅಗತ್ಯವಿರುವವರಿಗೆ ಉಚಿತ ಆಯುರ್ವೇದ ಔಷಧಿಗಳನ್ನು ವಿತರಿಸಲಾಯಿತು.

ವೈದ್ಯರಾದ ಡಾ. ಗುರುರಾಜ್ ಉಮಚಗಿ, ಡಾ. ದೀಪ್ತಿ ಹಾಗೂ ಡಾ. ವೀಣಾ, ಫಾರ್ಮಸಿ ಅಧಿಕಾರಿ ಎಂ.ಡಿ. ಖಾಜಾ ಹುಸೇನ್, ಮಾರುತಿ ಕಣ್ಣಿನ ಆಸ್ಪತ್ರೆಯ ಸಿಬ್ಬಂದಿ ಭಾಗ್ಯಶ್ರೀ ತಪಾಸಣೆ ನಡೆಸಿದರು.

ಕಾರ್ಯಕ್ರಮದಲ್ಲಿ ಜ್ಞಾನವಿಕಾಸ ಸಮನ್ವಯಾಧಿಕಾರಿ ಮಹೇಶ್ವರಿ, ವಲಯದ ಮೇಲ್ವಿಚಾರಕಿ ಅನ್ನಪೂರ್ಣ, ಸ್ಥಳೀಯ ಸೇವಾ ಪ್ರತಿನಿಧಿ ಮನೋಜ್, ಒಕ್ಕೂಟದ ಉಪಾಧ್ಯಕ್ಷೆ ಹಂಪಮ್ಮ, ಸರ್ಕಾರಿ ಆಯುರ್ವೇದ ಆಸ್ಪತ್ರೆ ಹಾಗೂ ಮಾರುತಿ ಕಣ್ಣಿನ ಆಸ್ಪತ್ರೆಯ ಸಿಬ್ಬಂದಿ ಮತ್ತಿತರರು ಉಪಸ್ಥಿತರಿದ್ದರು.

Edited By :
Kshetra Samachara

Kshetra Samachara

09/09/2026 09:50 pm

Cinque Terre

3.1 K

Cinque Terre

0

ಸಂಬಂಧಿತ ಸುದ್ದಿ